ಕೇಂದ್ರ ಸಚಿವ ಸಂಪುಟ ತೊರೆದ ಶಿವಸೇನೆಯ ಏಕೈಕ ಸಚಿವ ಅರವಿಂದ್ ಸಾವಂತ್

Update: 2019-11-11 04:33 GMT
ಕೇಂದ್ರ ಸಚಿವ ಅರವಿಂದ್ ಸಾವಂತ್

ಹೊಸದಿಲ್ಲಿ: ಮಹರಾಷ್ಟ್ರದಲ್ಲಿ ಸರಕಾರ ರಚನೆ ಕುರಿತಂತೆ ಬಿಜೆಪಿ-ಶಿವಸೇನೆ ನಡುವಿನ ಹಗ್ಗಜಗ್ಗಾಟದ ನಂತರದ ಬೆಳವಣಿಗೆಯಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರದಲ್ಲಿ ಶಿವಸೇನೆಯ ಏಕೈಕ ಸಚಿವರಾಗಿದ್ದ ಅರವಿಂದ್ ಸಾವಂತ್ ಇಂದು ತಮ್ಮ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.  ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವ ತನ್ನ ಯತ್ನವನ್ನು ಬಿಜೆಪಿ ಕೈಬಿಟ್ಟ ಮರುದಿನ ಹಾಗೂ ಶಿವಸೇನೆ ಸರಕಾರ ರಚಿಸುವ ನಿಟ್ಟಿನಲ್ಲಿ ಮುಂದಡಿಯಿಡುವ ಸಾಧ್ಯತೆಯ ನಡುವೆ ಈ ಬೆಳವಣಿಗೆ ನಡೆದಿದೆ.

"ಶಿವಸೇನೆ ಸತ್ಯದ ಜತೆಗೆ ನಿಂತಿದೆ. ಇಂತಹ ಸುಳ್ಳಿನ ವಾತಾವರಣದಲ್ಲಿ ನಾವೇಕೆ ದಿಲ್ಲಿಯಲ್ಲಿ ಸರಕಾರದಲ್ಲಿರಬೇಕು? ಇದೇ ಕಾರಣದಿಂದ ಇಂದು ನಾನು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಹನ್ನೊಂದು ಗಂಟೆಗೆ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯನ್ನೂ ನಡೆಸಲಿದ್ದೇನೆ,'' ಎಂದು ಸಾವಂತ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಹಾಗೂ ಶಿವಸೇನೆ ನಡುವೆ ಲೋಕಸಭಾ ಚುನಾವಣೆಗೂ ಮುನ್ನ ಸೀಟು ಹಂಚಿಕೆ ಹಾಗೂ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಬರಲಾಗಿತ್ತು ಹಾಗೂ ಇದನ್ನು ಎರಡೂ ಪಕ್ಷಗಳು ಒಪ್ಪಿದ್ದವು ಎಂದಿರುವ ಸಾವಂತ್, "ಈಗ ಈ ಸೂತ್ರವನ್ನು ತಿರಸ್ಕರಿಸಿ ಸೇನೆಯನ್ನು ಸುಳ್ಳುಗಾರನೆಂಬಂತೆ ಬಿಂಬಿಸಿರುವುದು ಆಘಾತಕಾರಿ. ಇದು ಮಹಾರಾಷ್ಟ್ರದ ಆತ್ಮಗೌರವಕ್ಕೆ ಅಪಮಾನ. ಸುಳ್ಳು ಹೇಳುವುದಕ್ಕೂ ಒಂದು ಮಿತಿಯಿದೆ. ಬಿಜೆಪಿ ಮಹಾರಾಷ್ಟ್ರದಲ್ಲಿ ಖಂಡನೀಯ ನಿಲುವು ತಳೆದಿದೆ,'' ಎಂದೂ ಸಾವಂತ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News