ಬಾಬರಿ ಮಸೀದಿ ಅಕ್ರಮವಾಗಿದ್ದರೆ ಧ್ವಂಸ ಪ್ರಕರಣದಲ್ಲಿ ಅಡ್ವಾಣಿಯೇಕೆ ವಿಚಾರಣೆ ಎದುರಿಸುತ್ತಿದ್ದಾರೆ: ಉವೈಸಿ ಪ್ರಶ್ನೆ

Update: 2019-11-11 08:04 GMT

ಹೈದರಾಬಾದ್, ನ.11:  "ಬಾಬರಿ ಮಸೀದಿ ಅಕ್ರಮವಾಗಿದ್ದರೆ ಅದನ್ನು ಧ್ವಂಸಗೈದ ಸಂಬಂಧ ಅಡ್ವಾಣಿ ಮತ್ತಿತರರು ಏಕೆ  ವಿಚಾರಣೆ ಎದುರಿಸುತ್ತಿದ್ದಾರೆ.  ಬಾಬ್ರಿ ಮಸೀದಿ ಸಕ್ರಮವಾಗಿದ್ದರೆ ಅಡ್ವಾಣಿಗೇಕೆ  ಭೂಮಿ ದೊರೆಯುತ್ತಿದೆ" ಎಂದು ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಪ್ರಶ್ನಿಸಿದ್ದಾರೆ. ಯಾರದ್ದೋ ಮನೆಯನ್ನು ಧ್ವಂಸಗೈದ ವ್ಯಕ್ತಿಗೆ ಅದೇ ಮನೆ ಹೇಗೆ ದೊರೆಯಬಹುದೆಂದೂ ಅವರು ಅಚ್ಚರಿ ವ್ಯಕ್ತಪಡಿಸಿದರು.

"ಒಬ್ಬ ವ್ಯಕ್ತಿ ನಿಮ್ಮ ಮನೆ ಧ್ವಂಸಗೈದರೆ ಹಾಗೂ ನೀವು ಸಂಧಾನಕಾರರ ಬಳಿ ಹೋದರೆ ಅವರು ಧ್ವಂಸಗೈದವನಿಗೇ ಮನೆ ಕೊಟ್ಟು ನಿಮಗೆ ಬೇರೆ ಕಡೆ ಜಾಗ ನೀಡುವುದಾಗಿ ಹೇಳಿದರೆ ನಿಮಗೆ ಹೇಗಾಗಬೇಡ?'' ಎಂದು ಅವರು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್ ತೀರ್ಪನ್ನು ಒಪ್ಪದ ತಮ್ಮನ್ನು ಟೀಕಿಸುವವರ ವಿರುದ್ಧ ಕಿಡಿಕಾರಿದ ಅವರು, ಅದನ್ನು ವಿರೋಧಿಸಲು ತಮಗೆ  ಹಕ್ಕಿದೆ ಎಂದರು. ಐದು ಎಕರೆ ಪರ್ಯಾಯ ಭೂಮಿ ನೀಡುವುದಾಗಿ ಹೇಳಿ ಮುಸ್ಲಿಮರನ್ನು ಅವಮಾನಿಸಲಾಗಿದೆ ಎಂದೂ ಅವರು ಹೇಳಿದರು. "ಬಾಬರಿ ಮಸೀದಿ ನಮ್ಮ ಕಾನೂನಾತ್ಮಕ ಹಕ್ಕು. ನಾವು ಜಮೀನಿಗೆ ಹೋರಾಟ ಮಾಡಿಲ್ಲ.  ನಮಗೆ  ಉಚಿತವಾಗಿ ಯಾವುದೂ ಬೇಡ, ನಮ್ಮನ್ನು ಭಿಕ್ಷುಕರಂತೆ ಕಾಣಬೇಡಿ. ನಾವು ಈ ದೇಶದ ಗೌರವಾನ್ವಿತ ನಾಗರಿಕರು'' ಎಂದು ಹೇಳಿದರು.

ಕಪಿಲ್ ಸಿಬಲ್ ಕೂಡ ಈ ಪ್ರಕರಣದಲ್ಲಿ ಹೋರಾಡಿದ್ದರೂ ನಂತರ ಕಾಂಗ್ರೆಸ್ ಅವರನ್ನು ತಡೆದಿತ್ತು ಎಂದು ಉವೈಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News