ಕಾಂಗ್ರೆಸ್ ಅನ್ನು ಮತ್ತೇ ಅಧಿಕಾರಕ್ಕೆ ತರುವ ವರ್ಚಸ್ಸು ಸಿದ್ದರಾಮಯ್ಯಗೆ ಇದೆ: ಎಚ್.ಡಿ.ದೇವೇಗೌಡ

Update: 2019-11-11 13:54 GMT

ಕಲಬುರಗಿ, ನ.11: ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿದೆ. ಚುನಾವಣೆ ಬಳಿಕವೂ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗುವುದಿಲ್ಲ. ಆದುದರಿಂದ, ಬಿಜೆಪಿ ಸರಕಾರಕ್ಕೆ ಯಾವುದೇ ಅಪಾಯವಾಗುವುದಿಲ್ಲ ಎಂಬುದು ನನ್ನ ನಂಬಿಕೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಕಾರಣವಾದ ಅಂಶಗಳ ಕುರಿತು ನಾನು ಈಗ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ ಎಂದರು.

ಸದ್ಯಕ್ಕೆ 106 ಶಾಸಕರನ್ನು ಹೊಂದಿರುವ ಬಿಜೆಪಿ ವಾಮಮಾರ್ಗದಿಂದ ಈಗ ಅಧಿಕಾರ ಹಿಡಿದಿದೆ. ಕೇವಲ 5-6 ತಿಂಗಳಿಗೆ ಮಾತ್ರ ಅವರು ಅಧಿಕಾರದಲ್ಲಿರುತ್ತಾರೆ. ನಾನು ಯಡಿಯೂರಪ್ಪ ಮನೆ ಬಾಗಿಲಿಗೂ ಹೋಗಲ್ಲ, ಸಿದ್ದರಾಮಯ್ಯ ಮನೆ ಬಾಗಿಲಿಗೂ ಹೋಗಲ್ಲ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಈಗ ಮಧ್ಯಂತರ ಚುನಾವಣೆ ನಡೆದರೆ ನಮ್ಮ ಪಕ್ಷವೇನು ಅಧಿಕಾರಕ್ಕೆ ಬರುವುದಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿದೆ. ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯಗೆ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವ ವರ್ಚಸ್ಸು ಇದೆ ಎಂದು ದೇವೇಗೌಡ ಹೇಳಿದರು.

ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಲು ಕಲಬುರಗಿಗೆ ಬಂದಿದ್ದೇನೆ. ಒಂದು ಕಾಲದಲ್ಲಿ ಈ ಭಾಗದಲ್ಲಿ ನಮಗೆ ಹೆಚ್ಚಿನ ಶಕ್ತಿ ಇತ್ತು. ಆದರೆ, ಈಗ ಆ ಶಕ್ತಿ ಕುಸಿದಿದೆ. ಜನ ಶಕ್ತಿ ಕೊಟ್ಟರೆ ಮತ್ತೆ ಪಕ್ಷ ಕಟ್ಟುತ್ತೇನೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನಮ್ಮ ಪಕ್ಷ ಅಸ್ತಿತ್ವ ಉಳಿಸಿಕೊಂಡಿದೆ ಎಂದು ಅವರು ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೆ. ಆದರೆ, ವಿಧಿ ತುಮಕೂರಿಗೆ ಕರೆದುಕೊಂಡು ಹೋಯಿತು. ಚುನಾವಣೆಯಲ್ಲಿ ಸೋತರೂ ಛಲಬಿಡದೇ ಈ ವಯಸ್ಸಿನಲ್ಲಿ ಹೋರಾಟ ಮಾಡುತ್ತಿದ್ದೇನೆ. ಅದರ ಪರಿಣಾಮವಾಗಿಯೇ ಪಕ್ಷ ಉಳಿದಿದೆ ಎಂದು ದೇವೇಗೌಡ ಹೇಳಿದರು.

ಉಪ ಚುನಾವಣೆ ನಡೆಯಲಿರುವ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಎಲ್ಲ ಕ್ಷೇತ್ರಗಳಲ್ಲೂ ನಮಗೆ ಪ್ರಬಲ ಅಭ್ಯರ್ಥಿಗಳು ಇಲ್ಲ. ನಾಲ್ಕು ಅಥವಾ ಐದು ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಹೋರಾಟ ಮಾಡಲಿದೆ. ಉಳಿದ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಅವರು ತಿಳಿಸಿದರು.

ಈಗಾಗಲೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು, ಎಲ್ಲ ಕಡೆ ಓಡಾಡುತ್ತಿದ್ದೇನೆ. ಕಾಂಗ್ರೆಸ್ ಹಾಗೂ ಬಿಜೆಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮಗಿಂತ ಮುಂದಿದ್ದಾರೆ ಎಂದು ದೇವೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News