ಮಂಗಳೂರು ಮನಪಾ ಸೇರಿ ರಾಜ್ಯದ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಾಳೆ ಚುನಾವಣೆ

Update: 2019-11-11 14:18 GMT

ಬೆಂಗಳೂರು, ನ.11: ಮಂಗಳೂರು ಹಾಗೂ ದಾವಣಗೆರೆ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯಾದ್ಯಂತ 14 ನಗರ ಸ್ಥಳೀಯ ಸಂಸ್ಥೆಗಳ 418 ವಾರ್ಡ್‌ಗಳಿಗೆ ನಾಳೆ(ನ.12) ಚುನಾವಣೆ ನಡೆಯಲಿದ್ದು, ನ.14ಕ್ಕೆ ಮತ ಎಣಿಕೆ ನಡೆಯಲಿದೆ.

ರಾಜ್ಯದ 2 ಮಹಾನಗರ ಪಾಲಿಕೆಯ 105, 6 ನಗರಸಭೆಗಳ 194, 3 ಪುರಸಭೆಗಳ 69, 3 ಪಟ್ಟಣ ಪಂಚಾಯಿತಿಯ 50 ಸೇರಿದಂತೆ 418 ವಾರ್ಡ್‌ಗಳ ಪೈಕಿ 9 ವಾರ್ಡ್‌ಗಳಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದಂತೆ ಒಟ್ಟಾರೆ 1587 ಅಭ್ಯರ್ಥಿಗಳ ಅಂತಿಮ ಕಣದಲ್ಲಿದ್ದು, ನಾಳೆ ಅದೃಷ್ಟ ಪರೀಕ್ಷೆಯನ್ನು ಎದುರಿಸಲಿದ್ದಾರೆ.

14 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1,388 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, 13,04,614 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

ಇವಿಎಂ ಬಳಕೆ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬಳಕೆ ಮಾಡುತ್ತಿದ್ದು, ಇವಿಎಂಗಳನ್ನು ಪರೀಕ್ಷಿಸಿ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಒಂದೇ ವಾರ್ಡ್‌ನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಂದರ್ಭಗಳಿರುವ ಹಿನ್ನೆಲೆಯಲ್ಲಿ ಮತದಾರರಿಗೆ ಉಂಟಾಗುವ ಗೊಂದಲ ತಪ್ಪಿಸಲು ಇವಿಎಂಗಳಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಅಳವಡಿಸಲಾಗುತ್ತದೆ. ಈ ಚುನಾವಣೆಯಲ್ಲಿ ಮತದಾರರ ಎಡಗೈ ಉಂಗುರ ಬೆರಳಿಗೆ ಶಾಯಿ ಹಾಕಲಾಗುತ್ತದೆ.

ನೋಟಾಗೆ ಅವಕಾಶ: ಇದೇ ಮೊದಲ ಬಾರಿಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೋಟಾಗೆ ಅವಕಾಶ ನೀಡಲಾಗಿದೆ. ಮತದಾರ ತನ್ನ ಇಚ್ಛೆಯಂತೆ ಯಾರೊಬ್ಬರಿಗೂ ತನ್ನ ಮತ ನೀಡಲು ಇಚ್ಛೆ ಇರುವುದಿಲ್ಲ ಎಂಬ ತೀರ್ಮಾನವನ್ನು ರಹಸ್ಯವಾಗಿ ಮತ ಚಲಾಯಿಸುವ ಮೂಲಕ ವ್ಯಕ್ತಪಡಿಸಲು ಮತಯಂತ್ರದ ಕೊನೆಯಲ್ಲಿ ನೋಟಾ ಮುದ್ರಿಸಲಾಗಿರುತ್ತದೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಚುನಾವಣಾ ಆಯೋಗ ಎಚ್ಚರಿಕೆ ವಹಿಸಿದೆ. ಈ ಸಂಬಂಧ ಪೊಲೀಸ್ ಇಲಾಖೆಯ ಸಹಕಾರವನ್ನು ಕೋರಲಾಗಿದ್ದು, ಎಲ್ಲೆಡೆ ಸೂಕ್ತ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ಶಾಂತಿಯುತ ಮತದಾನಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ರಾಜ್ಯ ಚುನಾವಣಾ ಆಯೋಗ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News