ರಾಜ್ಯದಲ್ಲಿ ಮತ್ತಷ್ಟು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ: ಸಚಿವ ಸಿ.ಟಿ.ರವಿ

Update: 2019-11-11 16:07 GMT

ಚಿಕ್ಕಮಗಳೂರು, ನ.11: ಮಹಾರಾಷ್ಟ್ರದಲ್ಲಿ ಮತದಾರರು ಬಿಜೆಪಿ ಪಕ್ಷಕ್ಕೆ ಮನ್ನಣೆ ನೀಡಿದ್ದು, ಅತೀ ಹೆಚ್ಚು ವಿಧಾನಸಭೆ ಸ್ಥಾನಗಳನ್ನು ಗೆದ್ದಿದೆ. ಆದರೆ ಪಕ್ಷ ಅಧಿಕಾರದ ಹಪಾಹಪಿಯನ್ನು ಪ್ರದರ್ಶಿಸದೇ ಬೆಂಬಲ ಇಲ್ಲ ಎಂದು ಅಲ್ಲಿನ ಬಿಜೆಪಿ ನಾಯಕ ಫಡ್ನವೀಸ್ ಸರಕಾರ ರಚಿಸುವ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾರೆ. ಬಿಜೆಪಿಯ ಬಹುವರ್ಷಗಳ ವೈಚಾರಿಕ ಮಿತ್ರ ಪಕ್ಷವಾದ ಶಿವಸೇನೆ ವೈಚಾರಿಕ ಸಂಬಂಧವನ್ನು ಉಳಿಸಿಕೊಳ್ಳುತ್ತದೋ, ಕಡಿದುಕೊಳ್ಳುತ್ತದೋ ಎಂಬುದನ್ನು ಕಾದು ನೋಡಬೇಕಿದೆ ಎಂದು ಸಕ್ಕರೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಸೋಮವಾರ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ವಿಧಾನಸಭೆ ಪೂರ್ವದಲ್ಲಿ ಶಿವಸೇನೆ-ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನಾಯಕತ್ವದಲ್ಲಿ ಎರಡೂ ಪಕ್ಷಗಳು ಚುನಾವಣೆ ಎದುರಿಸಿವೆ. ಜನ ವಿಶ್ವಾಸ ಇಟ್ಟು ಮತಹಾಕಿರುವುದೂ ಕೂಡ ಫಡ್ನವೀಸ್ ನಾಯಕತ್ವಕ್ಕೆ. ಶಿವಸೇನೆ ಈ ಹಿಂದೆ ಬಿಜೆಪಿ ನಾಯಕರನ್ನು ವ್ಯಕ್ತಿಗತವಾಗಿ, ಪಕ್ಷವನ್ನು ಬಹಿರಂಗವಾಗಿಯೂ ಟೀಕಿಸಿದೆ. ಈ ವೇಳೆ ನಾವು ಸಂಯಮದಿಂದಲೇ ವರ್ತಿಸಿದ್ದೇವೆ, ಶಿವಸೇನೆ ಬಿಜೆಪಿಯ ಬಹುವರ್ಷದ ವೈಚಾರಿಕ ಮಿತ್ರಪಕ್ಷವಾಗಿರುವುದರಿಂದ ಶಿವಸೇನೆಯೊಂದಿಗಿನ ಸಂಬಂಧವನ್ನು ಬಿಜೆಪಿ ಕಡಿದುಕೊಳ್ಳಬಾರದೆಂಬ ಭಾವನೆ ಬಿಜೆಪಿಯದ್ದಾಗಿದೆ. ಆದರೀಗ ಅವರು ತನ್ನ ಪಕ್ಷದವರೇ ಸಿಎಂ ಆಗಬೇಕೆಂಬ ವಾದ ಮುಂದಿಟ್ಟು ಬಿಜೆಪಿಗೆ ಬೆಂಬಲ ಘೋಷಣೆ ಮಾಡಿಲ್ಲ. ಹಾಗಾಗಿ ಅತೀದೊಡ್ಡ ಪಕ್ಷವಾಗಿಯೂ ಬಿಜೆಪಿ ಅಧಿಕಾರಕ್ಕೆ ಪಟ್ಟು ಹಿಡಿದಿಲ್ಲ ಎಂದರು.

ದೇಶದಲ್ಲಿ ರಾಜಕೀಯ ಹೊಂದಾಣಿಕೆ ಹೊಸದೇನಲ್ಲ. ಅವರು ಬೇರೆ ಪಕ್ಷದೊಂದಿಗೆ ಮೈತ್ರಿಕೊಂಡು ಸರಕಾರ ರಚಿಸಲು ಸ್ವತಂತ್ರರಿದ್ದಾರೆ. ಅಧಿಕಾರಕ್ಕಾಗಿ ನಾವು ಬಿಜೆಪಿ ಪಕ್ಷ ಕಟ್ಟಿಲ್ಲ. ಶಿವಸೇನೆ ಬಿಜೆಪಿಯೊಂದಿಗಿನ ಸಂಬಂಧ ಕಳೆದುಕೊಂಡು ಇತರ ಪಕ್ಷಗಳೊಂದಿಗೆ ಸೇರಿ ಸರಕಾರ ರಚಿಸಿದಲ್ಲಿ ತನ್ನ ಸಿದ್ಧಾಂತ ಹಾಗೂ ಮಹಾರಾಷ್ಟ್ರದ ಹಿತದೊಂದಿಗೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುತ್ತೇವೆ ಎಂದು ರವಿ ಹೇಳಿದರು. 

ಶಾಸಕ ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಬೇರೆ ಪಕ್ಷಗಳ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರೆ ಪವಿತ್ರ ರಾಜಕಾರಣ, ಬೇರೆಯವರು ಸೇರಿಸಿಕೊಂಡರೆ ಅನೈತಿಕ ರಾಜಕಾರಣ ಎನ್ನುವವರು ಕಾಂಗ್ರೆಸ್‍ನವರು. ಇದೇ ಮಾತನ್ನು ಕಳೆದ 7 ದಶಕಗಳಿಂದ ಕಾಂಗ್ರೆಸ್‍ನರು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಯಾವುದು ಪವಿತ್ರ ರಾಜಕಾರಣ ಎಂದು ಜನ ತೀರ್ಮಾನ ಮಾಡುತ್ತಾರೆಂದ ಅವರು, ಎಷ್ಟು ಶಾಸಕರು ಕಾಂಗ್ರೆಸ್‍ಗೆ ಹೋಗುತ್ತಾರೆಂಬ ಬಗ್ಗೆ ತಾನು ಬೇಹುಗಾರಿಕೆ ಮಾಡುತ್ತಿಲ್ಲ. ಬೇಹುಗಾರಿಕೆ ಮಾಡುತ್ತಿರುವವರಿಗೆ ಅದು ಗೊತ್ತಿರಬಹುದು. ಬಿಜೆಪಿ ಕೇಡರ್ ಬೇಸ್ ಪಾರ್ಟಿಯಾಗಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಸಿದ್ದಾಂತವೇ ಆಧಾರ. ಎಂತಹ ಪರಿಸ್ಥಿತಿ ಬಂದರೂ ಎದುರಿಸುತ್ತೇವೆ. ದೊಡ್ಡ ದೊಡ್ಡ ನಾಯಕರೇ ಪಕ್ಷ ಬಿಟ್ಟು ಹೋದಾಗ ಬಿಜೆಪಿಯವರು ಅಧೀರರಾಗಿಲ್ಲ. ಈಗಲೂ ಪಕ್ಷ ಇಂತಹ ಪಕ್ಷಾಂತರಕ್ಕೆ ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದರು.

ಉಪಚುನಾವಣೆಯಲ್ಲಿ ಬಿಜೆಪಿ ಒಂದು ಸೀಟು ಗೆಲ್ಲಲ್ಲ, ನಾವೇ ಗೆಲ್ಲುತ್ತೇವೆಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರಲ್ಲಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರ ಭವಿಷ್ಯ ಎಷ್ಟು ಸಾರಿ ನಿಜವಾಗಿದೆ ಎಂಬುದನ್ನು ತಿಳಿಯಬೇಕಿದೆ, ಮಕಾಡೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಎಂಬ ಮಾತು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರಿಗೆ ಅನ್ವಯವಾಗುತ್ತದೆ. ಮೋದಿ ಅವರ ಅಪ್ಪನಾಣೆಗೂ ಪ್ರಧಾನಿಯಾಗಲ್ಲ ಎಂದಿದ್ದರು, ಆದರೆ ಮೋದಿ ಎರಡು ಬಾರಿ ಪ್ರಧಾನಿಯಾದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರ ಬಿಜೆಪಿ ಗೆಲ್ಲಲ್ಲ, ಸಿಂಗಲ್ ನಂಬರ್ ಗೆ ಇಳಿಸುತ್ತೇವೆ ಎಂದಿದ್ದರು. ಆದರೆ ಸಿಂಗಲ್ ನಂಬರ್ ಯಾರದ್ದು? ಮತ್ತೆ ನಾನೇ ಸಿಎಂ ಅಂತಿದ್ರು ಆದರೆ ಏನಾಯ್ತು ಎಂದು ಪ್ರಶ್ನಿಸಿದ ರವಿ, ಸಿದ್ದರಾಮಯ್ಯ ನಾಟಕ ಮಾಡುವವರು, ನಿಜ ಜೀವನದಲ್ಲೂ ನಾಟಕ ನಡೆಯೊಲ್ಲ. ಪ್ರಜಾಪ್ರಭುತ್ವದ ಮಾಲಕತ್ವ ಇರೋದು ಜನರ ಕೈಯಲ್ಲಿ ಸಿದ್ದರಾಮಯ್ಯ ಅವರ ಕೈಯಲ್ಲಲ್ಲ, ಉಪಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆಂದು ಜನ ತೀರ್ಮಾನಿಸುತ್ತಾರೆಂದು ತಿರುಗೇಟು ನೀಡಿದರು.

"ಚುನಾವಣೆಗೂ ಮುನ್ನ ಕಾಂಗ್ರೆಸ್ ಇಬ್ಬಾಗ"
ಕಾಂಗ್ರೆಸ್‍ನಲ್ಲಿನ ಆಂತರಿಕ ಸಂಘರ್ಷ ಬಹಿರಂಗವಾಗಲಿದೆ ಎಂಬುದು ಈಗಾಗಲೇ ತಿಳಿದು ಬಂದಿದೆ. ಎಲ್ಲಿ ಎಲ್ಲವೂ ಸರಿ ಇಲ್ಲ, ಇದನ್ನು ಮುಚ್ಚಲು ಬಿಜೆಪಿ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ಅವರ ಪಾರ್ಟಿ ವ್ಯವಹಾರ ಆದರೂ ಅದೂ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ಇನ್ನಷ್ಟು ಕಾಂಗ್ರೆಸ್ ಶಾಸಕರು ಮೋದಿ ಆಡಳಿತ ಮೆಚ್ಚಿ ಬಿಜೆಪಿಯೊಂದಿಗೆ ಬರಲು ಆಶಯ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಮುಂಚೆಯೇ ಮತ್ತೊಂದು ಭಾಗವಾಗಿ ಕಾಂಗ್ರೆಸ್ ವಿಭಜನೆಯಾದರೂ ಆಶ್ಚರ್ಯವೇನಿಲ್ಲ ಎಂದು ಹೇಳಿದ ಸಿ.ಟಿ.ರವಿ, ಎಷ್ಟು ಜನ ಶಾಸಕರು ಬಿಜೆಪಿಗೆ ಸೇರುತ್ತಾರೆಂದು ಹೇಳಲು ಈ ಸಂದರ್ಭ ಸರಿಯಲ್ಲ. ಎಲ್ಲವನ್ನೂ ಈಗಲೇ ಹೇಳಿದರೆ ವ್ಯವಹಾರ ಕೆಟ್ಟೋಗುತ್ತೆ. ಸಿದ್ದರಾಮಯ್ಯ ಮಾತು ಎಷ್ಟು ಸತ್ಯವೋ ಅದಕ್ಕಿಂತಲೂ ಹೆಚ್ಚು ನನ್ನ ಮಾತು ಸತ್ಯ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News