ಅಕ್ರಮ ಪಡಿತರ ಸಾಗಾಟ: 23 ಟನ್ ಅಕ್ಕಿ ಮೂಟೆಗಳು ವಶಕ್ಕೆ

Update: 2019-11-11 16:44 GMT

ಜಮಖಂಡಿ,ನ.11: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿ ಹಾಗೂ ಅಕ್ಕಿ ಮೂಟೆಗಳನ್ನು ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಇಂದಿಲ್ಲಿ ವಶಪಡಿಸಿಕೊಂಡಿದ್ದಾರೆ.

ಜಮಖಂಡಿ ನಗರದ ಹೊರವಲಯದ ವಿಜಯಪುರ ರಸ್ತೆಯಲ್ಲಿ ಅಕ್ರಮ ಅಕ್ಕಿ ಸಾಗಾಟದ ವೇಳೆ ದಾಳಿ ನಡೆಸಿದ ಪೊಲೀಸರು ಒಂದು ಲಾರಿ ಹಾಗೂ 23 ಟನ್ ತೂಕದ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಚಾಲಕ, ಕ್ಲಿನರ್ ಸೇರಿದಂತೆ 5 ಜನರ ಮೇಲೆ ದೂರು ದಾಖಲಾಗಿದೆ. 3.44 ಲಕ್ಷ ರೂ. ಬೆಲೆಬಾಳುವ ಅಕ್ಕಿಯನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಆಹಾರ ನಿರೀಕ್ಷಕ ಎನ್.ಎಸ್. ದೇಸಾಯಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸರಕಾರ ಬಡವರಿಗೆ ಉಚಿತವಾಗಿ ಅಕ್ಕಿ ವಿತರಿಸುತ್ತಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ನಗರದ ಕೆಲವರು ಬಡವರಿಗೆ ಹಣದ ಆಮಿಷ ಒಡ್ಡಿ ಕಡಿಮೆ ದರದಲ್ಲಿ ಅಕ್ಕಿಯನ್ನು ಖರೀದಿಸಿ ಹತ್ತಾರು ಟನ್‌ಗಳಷ್ಟು ಅಕ್ಕಿಯನ್ನು ಸಂಗ್ರಹಿಸಿ ನೆರೆ ರಾಜ್ಯಗಳಲ್ಲಿ ಮಾರಿಕೊಳ್ಳುವುದರ ಮೂಲಕ ಅಧಿಕಾರಿಗಳ ಭಯವಿಲ್ಲದೆ ರಾಜಾರೋಷವಾಗಿ ವ್ಯಾಪಾರ ವಹಿವಾಟು ನಡೆಸುತಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News