ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಪರ ಬರಲಿದೆ: ಅನರ್ಹ ಶಾಸಕ ಎಚ್.ವಿಶ್ವನಾಥ್

Update: 2019-11-11 16:47 GMT

ಮೈಸೂರು,ನ.11: ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಪರ ಬರಲಿದೆ ಎಂಬ ವಿಶ್ವಾಸವಿದ್ದು, ಭಾರತದ ಇತಿಹಾಸದಲ್ಲಿ ನ.13 ರಂದು ಒಂದು ಐತಿಹಾಸಿಕ ತೀರ್ಪು ಹೊರಬೀಳಲಿದೆ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂದಿನ ಸ್ಪೀಕರ್ ರಮೇಶ್ ಕುಮಾರ್ ನಮ್ಮ ವಿರುದ್ಧ ಸಂವಿಧಾನ ವಿರೋಧಿ ಮತ್ತು ಕಾನೂನು ಬಾಹಿರ ತೀರ್ಪನ್ನು ನೀಡಿ ಶಾಸಕ ಸ್ಥಾನದಿಂದ ಅನರ್ಹ ಗೊಳಿಸಿದರು. ಇದರ ವಿರುದ್ಧ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ವಿಚಾರಣೆ ನಡೆಸಿರುವ ನ್ಯಾಯಾಲಯ ನಮ್ಮ ಪರವಾಗಿ ತೀರ್ಪನ್ನು ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಿಡಿ ವಿಚಾರವಾಗಿ ರಾಷ್ಟ್ರಪತಿಗಳನ್ನು ಭೇಟಿ ಮಾಡುವುದಾಗಿ ಹೇಳುತ್ತಿರುವ ಸಿದ್ದರಾಮಯ್ಯ ವಿರುದ್ಧ ಗರಂ ಆದ ವಿಶ್ವನಾಥ್, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ವಕೀಲರಲ್ಲ, ಸಿದ್ದರಾಮಯ್ಯ ವಕೀಲರು. ಸಿಡಿ ಎಷ್ಟರ ಮಟ್ಟಿಗೆ ಸಾಕ್ಷಿ ನಿಲ್ಲುತ್ತದೆ ಎಂದು ಅವರಿಗೆ ಗೊತ್ತು. ಆದರೆ ಅದನ್ನೇ ಪದೇ ಪದೇ ಹೇಳುತ್ತಿದ್ದಾರೆ ಎಂದು ಹೇಳಿದರು.

ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ವಿಶ್ವನಾಥ್, ಸಿ.ಪಿ.ಯೋಗೇಶ್ವರ್ ನನ್ನ ಸ್ನೇಹಿತ, ಅವರು ಹುಣಸೂರಿನಿಂದ ಸ್ಪರ್ಧೆ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಹುಣಸೂರಿನಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಹೈಕಮಾಂಡ್ ತೀರ್ಮಾನಿಸಲಿದೆ. ಹುಣಸೂರು ತಾಲೂಕು ಅಧ್ಯಕ್ಷ ಯೋಗಾನಂದ್ ಅವರ ಜೊತೆ ಈಗಾಗಲೇ ಮಾತನಾಡಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News