ಟಿಪ್ಪು ಪಠ್ಯ ತೆಗೆದರೆ ರಾಜ್ಯದಲ್ಲಿ ಸಮರ ಆಗುತ್ತದೆ: ವಾಟಾಳ್ ನಾಗರಾಜ್ ಎಚ್ಚರಿಕೆ

Update: 2019-11-11 17:03 GMT

ಮೈಸೂರು, ನ.11: ಟಿಪ್ಪು ಸುಲ್ತಾನ್ ವಿಷಯವನ್ನು ಪಠ್ಯ ಪುಸ್ತಕದಿಂದ ಕೈಬಿಡಬಾರದು ಮತ್ತು  ಔರಾದ್ಕರ್ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸೋಮವಾರ ಮೈಸೂರು ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಅವರು, ಯಡಿಯೂರಪ್ಪನವರೆ ನಿಮಗೆ ತಾಕತ್ ಇದ್ದರೆ ಎಲ್ಲಾ ಜಯಂತಿ ರದ್ದು ಮಾಡಿ. ಯಾವುದೇ ಪಕ್ಷದ ಮುಖ್ಯಮಂತ್ರಿ ಆದರು ರಾಜ್ಯದ ಹಿತ ಕಾಯಬೇಕು. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕೂಡಲೇ ಟಿಪ್ಪು ಜಯಂತಿ ರದ್ದು ಮಾಡಿದರು. ಚರಿತ್ರೆಗಳನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಚರಿತ್ರೆಗಳಿಗೆ ಅದರದೇ ಆದ ಮಹತ್ವ ಇದೆ ಎಂದು ಹೇಳಿದರು.

ರಾಜ್ಯಭಾರ ನಡೆಸುವವರಿಗೆ ಚಿಂತನೆ, ತಿಳುವಳಿಕೆ ಅಥವಾ ವಿವೇಕ ಇಲ್ಲ. ಸ್ವಪ್ರತಿಷ್ಠೆಯಿಂದ ಏನೂ ಮಾಡಕ್ಕಾಗಲ್ಲ. ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರದ್ದು ಮಾಡಿರುವುದು ಸರಿಯಾದ ಕ್ರಮವಲ್ಲ. ಇವರು ಟಿಪ್ಪು ಜಯಂತಿ ರದ್ದು ಮಾಡುವ ಮೊದಲು ಶಾಸನ ಸಭೆಗೆ ತಂದು ಬಹಿರಂಗ ಚರ್ಚೆ ಮಾಡಬೇಕಿತ್ತು. ಇವರಿಗೆ ತಾಕತ್ತಿದ್ದರೆ ಎಲ್ಲಾ ಜಯಂತಿ ರದ್ದು ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.

ಟಿಪ್ಪು ಜಯಂತಿ ಆಚರಣೆಯನ್ನು ಬೆಂಗಳೂರಿನಲ್ಲಿ ಮೊದಲು ಆಚರಣೆ ಮಾಡಿದವರು ನಾವು. ಹತ್ತು ವರ್ಷಗಳ ನಂತರ ಸಿದ್ದರಾಮಯ್ಯ ನವರು ಜಾರಿಗೆ ತಂದರು. ಟಿಪ್ಪು ಸುಲ್ತಾನ್ ಬಗ್ಗೆ ಇಷ್ಟೊಂದು ಕೆಟ್ಟ ಮನೋಭಾವ ಬರಬಾರದು. ಇತಿಹಾಸ, ಪುರಾಣವನ್ನು ಸರ್ಕಾರ ಬದಲಾವಣೆ ಮಾಡುವುದು ಸರಿಯಲ್ಲ. ಟಿಪ್ಪು ತನ್ನ ಎರಡು ಮಕ್ಕಳನ್ನು ದೇಶಕ್ಕಾಗಿ ಒತ್ತೆ ಇಟ್ಟರು, ಶೃಂಗೇರಿ ಮಠಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ನಂಜನಗೂಡು ಶ್ರೀಶ್ರೀಕಂಠೇಶ್ವರಸ್ವಾಮಿ ದೇವಸ್ಥಾನಕ್ಕೆ ಪಚ್ಚೆ ಲಿಂಗ ನೀಡಿದ್ದಾರೆ ಹಾಗೂ ರಾಜ್ಯಕ್ಕೆ ಟಿಪ್ಪು ಅನೇಕ ಕೊಡುಗೆ ನೀಡಿದ್ದಾರೆ. ಟಿಪ್ಪು  ಮೂಲತಃ  ಕರ್ನಾಟಕದ ದೇವನಹಳ್ಳಿಯಲ್ಲಿ ಹುಟ್ಟಿದವರು. ಹಾಗೆಯೇ ಪಠ್ಯದಲ್ಲಿ ಹೇಗೆ ಟಿಪ್ಪು ವಿಷಯ ತೆಗೆಯುತ್ತಿರೋ ನೋಡೋಣ. ಯಡಿಯೂರಪ್ಪನವರೇ ನೀವೇ ಪಕ್ಷದಲ್ಲಿ ಸುಪ್ರೀಂ, ನಿಮ್ಮ ಮಂತ್ರಿಗಳು ಮತ್ತು ಶಾಸಕರಿಗೆ ಬುದ್ಧಿ ಇಲ್ಲ. ಒಂದು ವೇಳೆ ಪಠ್ಯ ಪುಸ್ತಕದಿಂದ ಟಿಪ್ಪು ವಿಷಯ ತೆಗೆದರೆ ರಾಜ್ಯದಲ್ಲಿ ದೊಡ್ಡ ಸಮರ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನೀವು ಈ ಬಗ್ಗೆ ಕೈ ಹಾಕಲೇ ಬಾರದು. ನೆರೆ ಹಾವಳಿಯಿಂದ ಉತ್ತರ ಕರ್ನಾಟಕ ಸಂಪೂರ್ಣ ನಾಶವಾಗಿದೆ. ನೀವು ಯಾಕೆ ಉತ್ತರ ಕರ್ನಾಟವನ್ನು ಕಡೆಗಣಿಸಿದ್ದೀರಿ, ಪ್ರಧಾನ ಮಂತ್ರಿಗಳು ಕರ್ನಾಟಕ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ವಿರೋಧ ಪಕ್ಷಗಳು ನಾಟಕ ಆಡುತ್ತಿದೆ. ಜನರು ತಿರುಗಿ ಬೀಳುತ್ತಾರೆ. ಅಧಿವೇಶನ ನಡೆಸದೆ ಬೆಳಗಾವಿ, ಸುವರ್ಣ ಸೌಧವನ್ನು ಕಡೆಗಣಿಸಿದ್ದೀರಿ. ಉತ್ತರ ಕರ್ನಾಟಕದ ಜನರು ನರಕದಲ್ಲಿದ್ದಾರೆ. ಆದ್ದರಿಂದ ಕೂಡಲೇ 50 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ಕೇಂದ್ರದ ಮಂತ್ರಿಗಳು ರಾಜ್ಯಕ್ಕೆ ಬಂದಾಗ ಅವರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪೊಲೀಸ್ ಅವರಿಗೆ ಔರಾದಕ್ಕರ್ ವರದಿ ಜಾರಿಯಾಗಲಿಲ್ಲ. ಜಾರಿ ಮಾಡಿದರೆ ಅವರಿಗೆ ( ಔರಾದ್ಕರ್) ಹೆಸರು ಬರುತ್ತದೆ ಎಂದು ಇತರೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಉಪ ಚುನಾವಣೆಯು 15 ಕ್ಷೇತ್ರದಲ್ಲಿ ನಡೆಯುತ್ತಿದ್ದು, ಇದಕ್ಕೆ ಕಾರಣ ಪಕ್ಷಾಂತರಿಗಳು, ಅವಿವೇಕಿಗಳು ಮತ್ತು ಸಂವಿಧಾನ ವಿರೋಧಿಗಳು. ಅವರನ್ನು ಕ್ಷೇತ್ರದ ಮತದಾರರು ಬಹಿಷ್ಕರಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News