ಇರಾಕ್: ಮಧ್ಯಂತರ ಚುನಾವಣೆ ನಡೆಸಲು ಅಮೆರಿಕ ಒತ್ತಾಯ

Update: 2019-11-11 17:07 GMT
ಫೋಟೊ: aljazeera.com

ವಾಶಿಂಗ್ಟನ್, ನ. 11: ಮಧ್ಯಂತರ ಚುನಾವಣೆ ನಡೆಸುವಂತೆ ಹಾಗೂ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರುವಂತೆ ಅಮೆರಿಕವು ರವಿವಾರ ಇರಾಕ್ ಅಧಿಕಾರಿಗಳನ್ನು ಒತ್ತಾಯಿಸಿದೆ. ಅದೇ ವೇಳೆ, ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ನಡೆಸಲಾಗುತ್ತಿರುವ ಹಿಂಸಾಚಾರವನ್ನು ನಿಲ್ಲಿಸುವಂತೆಯೂ ಅದು ಇರಾಕ್ ಸರಕಾರಕ್ಕೆ ಕರೆ ನೀಡಿದೆ.

‘‘ಪ್ರತಿಭಟನಾನಿರತರ ವಿರುದ್ಧದ ಹಿಂಸೆಯನ್ನು ಇರಾಕ್ ಸರಕಾರ ನಿಲ್ಲಿಸಬೇಕು ಹಾಗೂ ಚುನಾವಣಾ ಸುಧಾರಣೆಗಳನ್ನು ತರುವ ಅಧ್ಯಕ್ಷ ಬರ್ಹಾಮ್ ಸಾಲಿಹ್‌ರ ಭರವಸೆಯನ್ನು ಈಡೇರಿಸಬೇಕು ಹಾಗೂ ಮಧ್ಯಂತರ ಚುನಾವಣೆಯನ್ನು ನಡೆಸಬೇಕು ಎಂದು ವಾಶಿಂಗ್ಟನ್ ಬಯಸುತ್ತದೆ’’ ಎಂದು ಶ್ವೇತಭವನ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಇರಾಕ್‌ನಲ್ಲಿ ಪ್ರತಿಭಟನಕಾರರು, ನಾಗರಿಕ ಕಾರ್ಯಕರ್ತರು ಮತ್ತು ಮಾಧ್ಯಮಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಗಳಿಂದ ಹಾಗೂ ಇಂಟರ್‌ನೆಟ್ ಮೇಲೆ ವಿಧಿಸಲಾಗಿರುವ ನಿರ್ಬಂಧಗಳಿಂದ ಅಮೆರಿಕ ಗಂಭೀರವಾಗಿ ಕಳವಳಗೊಂಡಿದೆ’’ ಎಂದು ಅದು ಹೇಳಿದೆ.

‘‘ಪ್ರತಿಭಟನಕಾರರನ್ನು ಚದುರಿಸಲು ಇರಾಕ್ ಭದ್ರತಾ ಪಡೆಗಳು ನಿರಂತರವಾಗಿ ಹಿಂಸಾಚಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಶ್ರುವಾಯು ಶೆಲ್ಲೊಂದು ಪ್ರತಿಭಟನಕಾರರೊಬ್ಬನ ಮುಖಕ್ಕೆ ಬಡಿಯುವುದನ್ನು ವೀಡಿಯೊವೊಂದು ತೋರಿಸಿದೆ.

ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಒತ್ತಾಯಿಸಿ ರಾಜಧಾನಿ ಬಗ್ದಾದ್ ಸೇರಿದಂತೆ ಇರಾಕ್‌ನಾದ್ಯಂತ ಜನರು ಅಕ್ಟೋಬರ್ 1ರಿಂದ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಆದರೆ, ರಾಜಕೀಯ ಪಕ್ಷಗಳು ಈ ವಾರ ಒಟ್ಟಾಗಿ ಸರಕಾರದ ಬೆಂಬಲಕ್ಕೆ ನೀತಿವೆ.

ಮೃತರ ಸಂಖ್ಯೆ 319ಕ್ಕೆ ಏರಿಕೆ

ಪ್ರತಿಭಟನೆಗಳು ಆರಂಭಗೊಂಡಂದಿನಿಂದ ಈವರೆಗೆ 319 ಮಂದಿ ಮೃತಪಟ್ಟಿದ್ದಾರೆ ಎಂದು ಇರಾಕ್ ಸಂಸತ್‌ನ ಮಾನವಹಕ್ಕುಗಳ ಸಮಿತಿ ಹೇಳಿದೆ.

ಪ್ರತಿಭಟನಾ ಸ್ಥಳಗಳಲ್ಲಿ ಮರೆಯಲ್ಲಿ ನಿಂತು ಗುಂಡು ಹಾರಿಸುವವರು ಸಕ್ರಿಯರಾಗಿದ್ದಾರೆ ಹಾಗೂ ಪ್ರತಿಭಟನಕಾರರ ವಿರುದ್ಧ ಬೇಟೆಯಾಡುವ ರೈಫಲ್‌ಗಳನ್ನು ಬಳಸಲಾಗುತ್ತಿದೆ ಎಂದು ಸಮಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News