ರೈತರ ಆತ್ಮಹತ್ಯೆಯ ಎನ್‌ಸಿಆರ್‌ಬಿ ವರದಿ ತಿರುಚುತ್ತಿರುವ ಕೇಂದ್ರ ಸರಕಾರ: ಪ್ರಿಯಾಂಕಾ ಆರೋಪ

Update: 2019-11-11 17:16 GMT

ಹೊಸದಿಲ್ಲಿ, ನ. 11: ರೈತರ ಆತ್ಮಹತ್ಯೆ ಕುರಿತ ಎನ್‌ಸಿಆರ್‌ಬಿ ವರದಿಯನ್ನು ಕೇಂದ್ರ ಸರಕಾರ ತಿರುಚುತ್ತಿದೆ ಹಾಗೂ ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

 ಇತ್ತೀಚೆಗಿನ ಎನ್‌ಸಿಆರ್‌ಬಿ ವರದಿಯಲ್ಲಿ ಹಲವು ಬದಲಾವಣೆ ಮಾಡಿರುವ ಹಾಗೂ ಮೊದಲ ಬಾರಿಗೆ ರಾಜ್ಯವಾರು ಅಂಕಿ-ಅಂಶಗಳನ್ನು ನೀಡದೇ ಇರುವ ಬಗೆಗಿನ ಮಾಧ್ಯಮ ವರದಿಯನ್ನು ಅವರು ತನ್ನ ಟ್ವೀಟ್‌ನೊಂದಿಗೆ ಲಗತ್ತಿಸಿದ್ದಾರೆ.

 ‘‘ಬಿಜೆಪಿ ಸರಕಾರ ಸತ್ಯದ ಬಗ್ಗೆ ಯಾಕೆ ಭಯ ಪಡುತ್ತಿದೆ ? ಬಿಜೆಪಿ ಆಡಳಿತದ ಅವಧಿಯಲ್ಲಿ ರೈತರು ನಿರಂತರ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ’’ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

 ರೈತರ ಸಮಸ್ಯೆ ಪರಿಹರಿಸುವ ಬದಲು, ರೈತರ ಆತ್ಮಹತ್ಯೆಗಳ ಬಗೆಗಿನ ವರದಿಯನ್ನು ಹತ್ತಿಕ್ಕುವುದು ಹಾಗೂ ತಿರುಚುವುದು ಹೆಚ್ಚು ಸೂಕ್ತ ಎಂದು ಬಿಜೆಪಿ ಸರಕಾರ ಪರಿಗಣಿಸಿದಂತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ರೈತರಿಗೆ ಸರಿಯಾದ ಬೆಲೆ, ಸೌಲಭ್ಯಗಳು ಹಾಗೂ ಗೌರವ ನೀಡುವಂತೆ ಅವರು ಆಗ್ರಹಿಸಿದ್ದಾರೆ. ಇನ್ನೊಂದು ಟ್ವೀಟ್‌ನಲ್ಲಿ ಅವರು ರೈತರು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ದೊರೆಯದೇ ಇರುವುದಕ್ಕೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಸರಕಾರದಡಿಯಲ್ಲಿ ರೈತರದ್ದು ಎಂತಹ ದುಸ್ಥಿತಿ ? ಈರುಳ್ಳಿ ಬೆಲೆ ಏರಿಕೆ ತಡೆಯಲು ಅವರು ಈರುಳ್ಳಿ ಆಮದು ಮಾಡಿಕೊಳ್ಳುತ್ತಿದ್ದಾರೆ. ಆದರೆ, ರೈತರಿಗೆ ತಾವು ಬೆಳೆದ ಈರುಳ್ಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News