‘ರಾಮ ಮಂದಿರ-ಬಾಬರಿ ಮಸೀದಿ’ ವಿವಾದದಲ್ಲಿ ಮತೀಯ ಅಂಧಾಭಿಮಾನಕ್ಕೆ ಸುಪ್ರೀಂ ಕುಮ್ಮಕ್ಕು: ಎಸ್‌ಯುಸಿಐ ಟೀಕೆ

Update: 2019-11-11 17:49 GMT

ಬೆಂಗಳೂರು, ನ. 11: ಜನತಾಂತ್ರಿಕ ನ್ಯಾಯಶಾಸ್ತ್ರದ ಇತಿಹಾಸದಲ್ಲಿ ಇದುವರೆಗೆ ಯಾವತ್ತೂ ಐತಿಹಾಸಿಕ ಸಾಕ್ಷ್ಯಾಧಾರಕ್ಕಿಂತ ನಂಬಿಕೆಗೆ ಹೆಚ್ಚಿನ ಸ್ಥಾನ ನೀಡಿಲ್ಲ. ‘ರಾಮಮಂದಿರ-ಬಾಬರಿ ಮಸೀದಿ’ ವಿಚಾರದಲ್ಲಿ ಮತೀಯ ಅಂಧಾಭಿಮಾನಕ್ಕೆ ಸರ್ವೋಚ್ಚ ನ್ಯಾಯಾಲಯ ಕುಮ್ಮಕ್ಕು ನೀಡಿದೆ ಎಂದು ಎಸ್‌ಯುಸಿಐ ಟೀಕಿಸಿದೆ.

ನ್ಯಾಯಶಾಸ್ತ್ರದ ಎಲ್ಲ ನೈತಿಕತೆ ಮತ್ತು ನಿಯಮಗಳನ್ನು ಉಲ್ಲಂಘಿಸಿರುವ, ಕೋರ್ಟ್ ಈ ತೀರ್ಪು ನ್ಯಾಯದ ಸರ್ವೋಚ್ಚ ನಿರಾಕರಣೆಯಾಗಿದೆ. ಜನತಂತ್ರದ ಹಕ್ಕುಗಳ, ಧರ್ಮ ನಿರಪೇಕ್ಷ ಮೌಲ್ಯಗಳ ಮತ್ತು ನ್ಯಾಯಾಂಗದ ತಟಸ್ಥತೆಯ ಮೇಲಿನ ದಾಳಿಗಳನ್ನು ಪ್ರತಿರೋಧಿಸಬೇಕೆಂದು ಮತ್ತು ಜನರ ಒಗ್ಗಟ್ಟನ್ನು ಕಾಪಾಡಬೇಕೆಂದು ಎಸ್‌ಯುಸಿಐ ಜನತೆಗೆ ಕರೆ ನೀಡಿದೆ.

ರಾಮಮಂದಿರ-ಬಾಬರಿ ಮಸೀದಿ ವಿವಾದದ ಕುರಿತು ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ತೀರ್ಪೂ ಸೇರಿದಂತೆ ಯಾವುದೇ ಕೃತ್ಯದ ಬಗ್ಗೆ ಸರಿಯಾದ ತೀರ್ಮಾನಕ್ಕೆ ಬರಬೇಕೆಂದರೆ ನಾವು ಸತ್ಯಾಂಶಗಳನ್ನು ಐತಿಹಾಸಿಕವಾಗಿ, ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ನಿರ್ಭಾವುಕತೆಯಿಂದ ಪರಿಶೀಲಿಸಬೇಕು ಎಂದು ಆಗ್ರಹಿಸಲಾಗಿದೆ.

ವಾಲ್ಮೀಕಿಯು ರಾಮನನ್ನು ಒಬ್ಬ ಅವತಾರ ಪುರುಷನನ್ನಾಗಿ ಪುರಾಣದಲ್ಲಿ ಚಿತ್ರಿಸಿದ್ದಾನೆ. ಈ ಪುರಾಣ ಕಥೆಯನ್ನು ರಾಮ ಹುಟ್ಟುವುದಕ್ಕಿಂತ ಎಷ್ಟೋ ವರ್ಷಗಳ ಮೊದಲೇ ರಚಿಸಲಾಗಿತ್ತು ಎನ್ನಲಾಗುತ್ತಿದೆ ಮತ್ತು ಅದರಂತೆ ರಾಮನು ದಶರಥ ರಾಜನ ಅರಮನೆಯಲ್ಲಿ ಹುಟ್ಟಿದನೇ ಹೊರತು, ನಂತರ ಬಾಬರಿ ಮಸೀದಿ ಕಟ್ಟಲ್ಪಟ್ಟ ಈ ವಿವಾದಿತ ಸ್ಥಳದಲ್ಲಿ ಅಲ್ಲ. ಬಾಬರಿ ಮಸೀದಿಯನ್ನು 1528ರಲ್ಲಿ ಕಟ್ಟಲಾಯಿತು ಎಂದು ಹೇಳಲಾಗುತ್ತದೆ. ಆ ಕಾಲದಲ್ಲಿ ಇದನ್ನು ವಿರೋಧಿಸಿದ ಯಾವುದೇ ಸಾಕ್ಷ್ಯಾಧಾರಗಳಿಲ್ಲ. 1574-75ರಲ್ಲಿ ರಾಮಚರಿತ ಮಾನಸವನ್ನು ರಚಿಸಿ, ರಾಮನನ್ನು ಹಿಂದುಗಳ ನಡುವೆ ಜನಪ್ರಿಯಗೊಳಿಸಿದ ಸಂತ ತುಳಸೀದಾಸರು ಕೂಡ ರಾಮನ ಜನ್ಮಸ್ಥಾನದಲ್ಲಿ ಮಸೀದಿಯೊಂದನ್ನು ಕಟ್ಟಲಾಗಿದೆ ಎಂದು ಪ್ರಸ್ತಾಪಿಸಿಲ್ಲ.

ಚೈತನ್ಯ, ರಾಮಕೃಷ್ಣ ಪರಮಹಂಸ, ವಿವೇಕಾನಂದ ಮೊದಲಾದ ಹಿಂದೂ ಸಂತರು ರಾಮನ ಜನ್ಮಸ್ಥಾನದಲ್ಲಿ ಮಸೀದಿಯೊಂದನ್ನು ನಿರ್ಮಿಸಲಾಗಿದೆ ಎಂಬ ಪ್ರಶ್ನೆಯನ್ನು ಎಂದೂ ಎತ್ತಿಲ್ಲ. ವಿವೇಕಾನಂದರಂತೂ ರಾಮ ಓರ್ವ ಐತಿಹಾಸಿಕ ವ್ಯಕ್ತಿ ಎಂಬ ವಾದದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದ್ದಾರೆ. ಸುಮಾರು 300 ವರ್ಷಗಳಿಗೂ ಹೆಚ್ಚುಕಾಲ ಬಾಬರಿ ಮಸೀದಿಯ ಅಸ್ತಿತ್ವದ ಬಗ್ಗೆ ಯಾರೂ ಪ್ರಶ್ನೆ ಮಾಡದೆ, ಬ್ರಿಟಿಷ್ ಆಳ್ವಿಕೆಯಿದ್ದ 1885ರಲ್ಲಿ ಕೆಲವು ಹಿಂದೂ ಪುರೋಹಿತರು ಈ ಸಂಬಂಧ ಒಂದು ವಿವಾದವನ್ನು ತೆಗೆದರು. ಸಿಪಾಯಿ ದಂಗೆಯ ನಂತರದ ಕಾಲಘಟ್ಟದಲ್ಲಿ ಹಿಂದೂ-ಮುಸ್ಲಿಮರ ನಡುವೆ ಒಡಕನ್ನು ತರುವುದಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿ ನಾಯಕರು ಈ ವಿವಾದಕ್ಕೆ ಪ್ರೋತ್ಸಾಹ ನೀಡಿದರು. ಅಲ್ಲಿ ನಮಾಝನ್ನು ತಡೆಯುವುದಕ್ಕಾಗಿ 1949ರಲ್ಲಿ ರಾಮಲಲ್ಲಾವನ್ನು (ರಾಮನ ವಿಗ್ರಹ) ಮಸೀದಿಯ ಆವರಣದಲ್ಲಿ ರಾತ್ರೋರಾತ್ರಿ ರಹಸ್ಯವಾಗಿ ಇರಿಸಲಾಯಿತು. 1986ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಹಿಂದೂ ಮತಗಳನ್ನು ಸೆಳೆಯುವುದಕ್ಕಾಗಿ ಮಸೀದಿಯ ಹಿಂದಿನ ಬಾಗಿಲನ್ನು ತೆರೆದು ರಾಮನ ಪೂಜೆಗೆ ಅವಕಾಶ ನೀಡಿದರು. ಇದರಿಂದ ಪ್ರೇರಿತವಾಗಿ ಬಿಜೆಪಿ-ಸಂಘಪರಿವಾರ ಹಿಂದೂ ಮತಗಳನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಳ್ಳುವುದಕ್ಕಾಗಿ ಮೊದಲಿಗೆ ರಾಮ ರಥಯಾತ್ರೆಯನ್ನು ಆರಂಭಿಸಿ, ವ್ಯಾಪಕವಾದ ಕೋಮುಗಲಭೆಗಳನ್ನು ಹುಟ್ಟುಹಾಕಿ ನಂತರ ಐತಿಹಾಸಿಕ ಸ್ಮಾರಕವಾದ ಮಸೀದಿಯನ್ನು ಕೆಡವಿದರು.

ಅಯೋಧ್ಯೆಯ ಪ್ರಾಚೀನ ಇತಿಹಾಸದ ಕುರಿತ ಶೋಧನೆಗಳ ಬಗ್ಗೆ ಪುರಾತತ್ವ ತಜ್ಞರಲ್ಲೇ ಭಿನ್ನಾಭಿಪ್ರಾಯಗಳಿವೆ. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಅವಲಂಬಿತವಾದ ಪುರಾತತ್ವ ಇಲಾಖೆ ವರದಿಯನ್ನು ವಾದಕ್ಕಾಗಿ ಒಪ್ಪಿಕೊಂಡರೂ ಬಾಬರಿ ಮಸೀದಿ ಇದ್ದ ಜಾಗವೇ ರಾಮನ ಜನ್ಮಸ್ಥಳವೆಂದು ಸಾಬೀತಾಗುವುದಿಲ್ಲ. ಇಂದು ಭೂಮಿಯ ಅಡಿ ಸೇರಿರುವ ಎಷ್ಟೋ ಪ್ರಾಚೀನ ಕಾಲದ ಕಟ್ಟಡಗಳಿವೆ. ಉತ್ಖನನ ಸಂದರ್ಭದಲ್ಲಿ ಇವು ದೊರಕುತ್ತಿದ್ದು ಇವುಗಳ ಬಗ್ಗೆ ಪುರಾತತ್ವಶಾಸ್ತ್ರಜ್ಞರು ಭಿನ್ನವಾದ ವಿವರಗಳನ್ನು ನೀಡುತ್ತಾರೆ.

ಎಷ್ಟೋ ಬೌದ್ಧ ದೇವಾಲಯಗಳು ಮತ್ತು ಸ್ತೂಪಗಳನ್ನು ಕೆಡವಿ ಹಿಂದೂ ದೇವಾಲಯಗಳನ್ನು ಕಟ್ಟಿರುವುದರ ಬಗ್ಗೆ ಬೇಕಾದಷ್ಟು ಪುರಾವೆಗಳಿವೆ. ಇಂತಹ ಹಿಂದೂ ದೇವಾಲಯಗಳನ್ನು ಮತ್ತೆ ಕೆಡವಿ ಬೌದ್ಧ ಮಂದಿರಗಳನ್ನು ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ನ್ಯಾಯಯುತವೆಂದು ಪರಿಗಣಿಸಬಹುದೇ? 1949ರ ರಾಮಲಲ್ಲಾ ಸ್ಥಾಪನೆಯನ್ನು ಮತ್ತು 1992ರ ಬಾಬರಿ ಮಸೀದಿ ಧ್ವಂಸವನ್ನು ಕಾನೂನುಬಾಹಿರ ಕೃತ್ಯಗಳೆಂದು ನ್ಯಾಯಾಲಯವು ಟೀಕಿಸಿದ್ದರೂ, ಬಾಬರಿ ಮಸೀದಿಯನ್ನು ದೇವಾಲಯವನ್ನು ಕೆಡವಿ ಕಟ್ಟಲಾಗಿದೆ ಎಂಬುದನ್ನು ತಿರಸ್ಕರಿಸಿದರೂ, ಧರ್ಮಗ್ರಂಥಗಳು ಭಿನ್ನಭಿನ್ನವಾದ ವ್ಯಾಖ್ಯಾನಗಳಿಗೆ ಒಳಗಾಗುತ್ತವೆ ಎಂಬುದನ್ನು ಒಪ್ಪಿಕೊಂಡರೂ, ನ್ಯಾಯಾಲಯವು ನಂಬಿಕೆ ಮತ್ತು ವಿಶ್ವಾಸಗಳು ತೋರಿಕೆಯದ್ದಲ್ಲ, ನೈಜವಾದದ್ದು ಎಂದು ಒಪ್ಪಿಕೊಳ್ಳಲು ಬೇಕಾದ ಸ್ವಾಭಾವಿಕ ಆಧಾರಗಳು ನ್ಯಾಯಾಲಯದ ಬಳಿ ಇರುವುದರಿಂದ ಆರಾಧಕನ ನಂಬಿಕೆಗೆ ತಲೆಬಾಗಲೇ ಬೇಕಾಗುತ್ತದೆ ಎಂದು ಹೇಳಿರುವುದು ಆಶ್ಚರ್ಯಕರವಾಗಿದೆ.

ಇದನ್ನು ಆಧರಿಸಿ ಆ ವಿವಾದಿತ ಸಂಪೂರ್ಣ ಜಮೀನನ್ನು ರಾಮಮಂದಿರ ನಿರ್ಮಿಸುವುದಕ್ಕಾಗಿ ರಚನೆಯಾಗುವ ಟ್ರಸ್ಟ್ ಸುಪರ್ದಿಗೆ ಒಪ್ಪಿಸಲಾಗಿದೆ ಮತ್ತು ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಬೇರೆ ಭಾಗದಲ್ಲಿ 5 ಎಕರೆ ಭೂಮಿ ನೀಡಬೇಕೆಂದು ಆದೇಶಿಸಲಾಗಿದೆ. ಇದು ಒಂದು ರೀತಿಯಲ್ಲಿ ಸಂಘ ಪರಿವಾರಕ್ಕೆ ಉಡುಗೊರೆ ನೀಡಿದಂತೆ ಮತ್ತು ಅಲ್ಪಸಂಖ್ಯಾತರಿಗೆ ಅನುಕಂಪ ತೋರಿದಂತೆ ಆಗಿದೆ ಎಂದು ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಉಮಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

ರಾಮಮಂದಿರ-ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪು ಬಿಜೆಪಿ-ಸಂಘಪರಿವಾರವನ್ನು ಹರ್ಷದಿಂದ ಮೆರೆಯುವಂತೆ ಮಾಡಿದೆ ಮತ್ತು ಐತಿಹಾಸಿಕ ಸ್ಮಾರಕವನ್ನು ಕೆಡವಿದ ಅವರ ಅಪರಾಧಕ್ಕೆ ನ್ಯಾಯಾಂಗದ ಮನ್ನಣೆ ದೊರೆತಂತಾಗಿದೆ. ಆದರೆ ಇದು ದೇಶದ ಜನತಾಂತ್ರಿಕ, ಧರ್ಮನಿರಪೇಕ್ಷ ಮನೋಭಾವನೆಯುಳ್ಳ ವಿಚಾರವಂತ ಜನರಲ್ಲಿ ಕಾಳಜಿ ಮತ್ತು ಆತಂಕಗಳನ್ನು ಸೃಷ್ಟಿಸಿದೆ ಮಾತ್ರವಲ್ಲದೆ, ನ್ಯಾಯಾಂಗದ ತಟಸ್ಥ್ಯದ ಬಗ್ಗೆಯೇ ಪ್ರಶ್ನೆಗಳನ್ನು ಎತ್ತಿದೆ’

-ಕೆ.ಉಮಾ, ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News