ಅನರ್ಹ ಶಾಸಕರ ಪ್ರಕರಣ : ನ.13ರಂದು ಸುಪ್ರೀಂ ತೀರ್ಪು

Update: 2019-11-11 18:23 GMT

ಹೊಸದಿಲ್ಲಿ, ನ.11: ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಕರ್ನಾಟಕದ 17 ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂಕೋರ್ಟ್ ನ.13ರಂದು ತೀರ್ಪು ಪ್ರಕಟಿಸಲಿದೆ.

ನ್ಯಾಯಾಧೀಶರಾದ ಎನ್‌ವಿ ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ಅಕ್ಟೋಬರ್ 25ರಂದು ವಿಚಾರಣೆ ಪೂರ್ಣಗೊಳಿಸಿದ್ದು ತೀರ್ಪನ್ನು ಕಾಯ್ದಿರಿಸಿದೆ. ಇದೀಗ ನ.13ಕ್ಕೆ ಅನರ್ಹ ಶಾಸಕರ ರಾಜಕೀಯ ಭವಿಷ್ಯ ನಿರ್ಧಾರವಾಗುವ ನಿರೀಕ್ಷೆಯಿದೆ.

  ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ 17 ಶಾಸಕರು ಸರಕಾರದ ವಿರುದ್ಧ ಧ್ವನಿ ಎತ್ತಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅಂದಿನ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಈ ಶಾಸಕರನ್ನು ಅನರ್ಹಗೊಳಿಸಿದ್ದು ಇದನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ್ದರು. ಈ ಮಧ್ಯೆ, ಶಾಸಕರನ್ನು ಅನರ್ಹಗೊಳಿಸಿದ ಕಾರಣ ತೆರವಾಗಿರುವ 15 ವಿಧಾನಸಭಾ ಸ್ಥಾನಗಳಿಗೆ ಚುನಾವಣಾ ಆಯೋಗ ಡಿಸೆಂಬರ್ 5ರಂದು ಉಪಚುನಾವಣೆ ಘೋಷಿಸಿದೆ. ನವೆಂಬರ್ 11ರಿಂದ 18ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಿದೆ.

ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಬಗ್ಗೆ ತೀರ್ಪು ಪ್ರಕಟವಾಗುವವರೆಗೆ ಉಪಚುನಾವಣೆ ನಡೆಸದಂತೆ ಚುನಾವಣಾ ಆಯೋಗಕ್ಕೆ ಸೂಚಿಸಬೇಕೆಂದು ಅನರ್ಹ ಶಾಸಕರು ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.

  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಗೊಂಡ ಬಳಿಕ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತ್ತಿತ್ವಕ್ಕೆ ಬಂದಿದ್ದು ವಿಧಾನಸಭೆಯ ಈಗಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಚೇರಿಯನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜೀನಾಮೆ ನೀಡುವುದು ಶಾಸಕರ ಸಂವಿಧಾನದತ್ತ ಹಕ್ಕಾಗಿದೆ ಮತ್ತು ಇದನ್ನು ಸ್ಪೀಕರ್ ಒಪ್ಪಿಕೊಳ್ಳಬೇಕು ಎಂದು ವಾದ ಮಂಡಿಸಿದ್ದಾರೆ.

 ಕರ್ನಾಟಕ ಕಾಂಗ್ರೆಸ್ ಪರ ವಾದ ಮಂಡಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಕಪಿಲ್ ಸಿಬಲ್, ಅಂದಿನ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಅಧಿಕಾರ ವ್ಯಾಪ್ತಿಯಡಿ ಶಾಸಕರನ್ನು ಅನರ್ಹಗೊಳಿಸಿದ್ದು ಈ ನಿರ್ಧಾರವನ್ನು ಪ್ರಶ್ನಿಸುವಂತಿಲ್ಲ ಎಂದು ವಾದ ಮಂಡಿಸಿದ್ದಾರೆ. ಅಲ್ಲದೆ ಇದು ಸಾಂವಿಧಾನಿಕ ಮಹತ್ವದ ಪ್ರಕರಣವಾಗಿರುವುದರಿಂದ ಇದನ್ನು ಸಾಂವಿಧಾನಿಕ ಪೀಠಕ್ಕೆ ವಹಿಸಬೇಕು ಎಂದು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News