ಎನ್‌ಜಿಇಎಫ್ ಕೈಗಾರಿಕಾ ಸಂಸ್ಥೆಯ ಪುನಶ್ಚೇತನಕ್ಕೆ ಕ್ರಮ: ಸಚಿವ ಜಗದೀಶ್ ಶೆಟ್ಟರ್

Update: 2019-11-11 18:26 GMT

ಧಾರವಾಡ, ನ.11: ಎನ್‌ಜಿಇಎಫ್ ಕೈಗಾರಿಕಾ ಸಂಸ್ಥೆಯ ಪುನಶ್ಚೇತನಕ್ಕೆ 30 ಕೋಟಿ ರೂ. ಗಳ ಅನುದಾನದ ಅವಶ್ಯಕತೆಯಿದ್ದು, ಇದನ್ನು ಮುಖ್ಯಮಂತ್ರಿ ಜೊತೆ ಸಮಾಲೋಚಿಸಿ ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಸೋಮವಾರ ನಗರದಲ್ಲಿರುವ ಎನ್‌ಜಿಇಎಫ್ ಕೈಗಾರಿಕಾ ಸಂಸ್ಥೆಗೆ ಭೇಟಿ ನೀಡಿ, ಸಂಸ್ಥೆಯ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

ಎನ್‌ಜಿಇಎಫ್ ಉದ್ಯಮವು ಮೂಲತಃ ಬೆಂಗಳೂರಿನಲ್ಲಿ ಸ್ಥಾಪನೆಯಾಗಿತ್ತು. ಕೇಂದ್ರ ಸರಕಾರವು ಈ ಉದ್ಯಮವನ್ನು ಬಂದ್ ಮಾಡಲು ನಿರ್ಧರಿಸಿದ್ದರಿಂದ 1984 ರಲ್ಲಿ ಹುಬ್ಬಳ್ಳಿಯ ರಾಯಾಪುರದಲ್ಲಿ ಮರುಸ್ಥಾಪನೆ ಮಾಡಲು ನಿರ್ಧರಿಸಲಾಯಿತು. ಬೆಂಗಳೂರಿನಲ್ಲಿದ್ದ ಎನ್‌ಜಿಇಎಫ್ ಸಂಸ್ಥೆಯ ಯಂತ್ರೋಪಕರಣಗಳನ್ನು ಇಲ್ಲಿಗೆ ತಂದು ಮರುಸ್ಥಾಪಿಸಲಾಯಿತು ಎಂದು ಅವರು ಹೇಳಿದರು.

ಆರಂಭದಲ್ಲಿ ಹೆಚ್ಚು ಪ್ರಗತಿ ಕಾಣದ ಈ ಸಂಸ್ಥೆಯು ಇಂದು ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಿ ಸ್ಥಳೀಯರಿಗೆ ಉದ್ಯೋಗ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ತನ್ನದೆ ಆದ ಕೊಡುಗೆ ನೀಡುತ್ತಿದೆ. 2017-18ರಲ್ಲಿ ಸಂಸ್ಥೆಯು 31.20 ಕೋಟಿ ರೂ. ವಹಿವಾಟನ್ನು ನಡೆಸಿದ್ದು, 38.96 ಲಕ್ಷ ರೂ.ಲಾಭವನ್ನು ಗಳಿಸಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

2018- 19ರಲ್ಲಿ ರೂ. 132.36 ಕೋಟಿ ರೂ.ಗಳ ವಹಿವಾಟನ್ನು ನಡೆಸಿದ್ದು, 1.78 ಕೋಟಿ ರೂ.ಗಳ ನಿರ್ವಹಣಾ ಲಾಭ ಮತ್ತು 52.84 ಲಕ್ಷ ರೂ.ಗಳ ನಿವ್ವಳ ಲಾಭವನ್ನು ಎನ್‌ಜಿಇಎಫ್ ಗಳಿಸಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಎನ್‌ಜಿಇಎಫ್ ಕೈಗಾರಿಕಾ ಸಂಸ್ಥೆಯು ಹೆಸ್ಕಾಂದೊಂದಿಗೆ ಒಪ್ಪಂದ ಮಾಡಿಕೊಂಡು ಟ್ರಾನ್ಸ್‌ಫಾರ್ಮರ್‌ಗಳ ರಿಪೇರಿ ಹಾಗೂ ಉತ್ಪಾದನೆ ಕಾರ್ಯ ನಿರ್ವಹಿಸುತ್ತಿದೆ. ಎನ್‌ಜಿಇಎಫ್ ಕೈಗಾರಿಕಾ ಸಂಸ್ಥೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಯಂತ್ರೋಪಕರಣಗಳು ಹಳೆಯದಾಗಿದ್ದು, ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ ಎಂದು ಅವರು ತಿಳಿಸಿದರು. ಆದರೂ ಸಹ ಸಂಸ್ಥೆಯು ಲಭ್ಯವಿರುವ ನುರಿತ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು ಅತ್ಯುತ್ತಮ ಗುಣಮಟ್ಟದ ಮೋಟಾರುಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಪೂರೈಕೆ ಮಾಡಿ, ಅಭಿವೃದ್ಧಿಪಡಿಸುತ್ತಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಎನ್‌ಜಿಇಎಫ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕಿರಣ್ ಅಡವಿ ಮಾತನಾಡಿ, ಎನ್‌ಜಿಇಎಫ್ ಸಂಸ್ಥೆಯು ಉತ್ತಮ ಗುಣಮಟ್ಟದ ಉತ್ಪಾದನೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಹೆಸ್ಕಾಂ, ಕೈಗಾ ಅಣುಸ್ಥಾವರ, ಮಿಲಿಟರಿ, ಎಚ್‌ಎಂಟಿ ಮತ್ತು ಇಸ್ರೋದಂತಹ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಿಗೆ ಮೋಟಾರು, ಸ್ವಿಚ್‌ಗೇರ್ ಮತ್ತು ಟ್ರಾನ್ಸ್‌ಫಾರ್ಮರ್‌ಗಳನ್ನು ಪೂರೈಕೆ ಮಾಡಲು ಒಪ್ಪಂದ ಮಾಡಿಕೊಳ್ಳುತ್ತಿದೆ. ಮತ್ತು ಬೆಳಗಾವಿ, ತರಿಕೇರಿಗಳಲ್ಲಿ ಎನ್‌ಜಿಇಎಫ್ ಸಂಸ್ಥೆಯ ಶಾಖೆಗಳನ್ನು ಆರಂಭಿಸಲಾಗಿದ್ದು, ಸದ್ಯದಲ್ಲಿಯೇ ಕೊಪ್ಪಳದಲ್ಲಿ ಮತ್ತೊಂದು ಶಾಖೆಯನ್ನು ಆರಂಭಿಸಲಾಗುತ್ತಿದೆ ಎಂದರು.

ಸಂಸ್ಥೆಯಲ್ಲಿ 250ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಲಾಭದಾಯಕ ಉದ್ಯಮವಾಗಿ ಎನ್‌ಜಿಇಎಫ್ ಸಂಸ್ಥೆಯು ಬೆಳೆಯುತ್ತಿದೆ. ಸಕಾಲದಲ್ಲಿ ಸರಕಾರವು ಅಗತ್ಯ ಆರ್ಥಿಕ ನೆರವು ನೀಡಿದರೆ ಇನ್ನು ಹೆಚ್ಚು ಸಮರ್ಥವಾಗಿ ಕೆಲಸ ಮಾಡಿ ಹೆಚ್ಚಿನ ಉದ್ಯೋಗ, ಲಾಭಾಂಶ ಮತ್ತು ಕೈಗಾರಿಕೆಗಳಿಗೆ ಪೂರಕವಾದ ಉತ್ಪನ್ನಗಳನ್ನು ಪೂರೈಸಬಹುದೆಂದು ಅವರು ಹೇಳಿದರು.

ಸಭೆಯಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್ ಸಿ.ಆರ್, ಮತ್ತು ವ್ಯವಸ್ಥಾಪಕ ಎಚ್.ಎಂ.ಬ್ಯಾಹಟ್ಟಿ ಹಾಗೂ ವಿವಿಧ ಭಾಗಗಳ ಮುಖ್ಯಸ್ಥರು, ತಾಂತ್ರಿಕ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News