ದಾವಣಗೆರೆ ಜಿ.ಪಂ ಅಧ್ಯಕ್ಷರಾಗಿ ಯಶೋಧಮ್ಮ ಮರುಳಪ್ಪ ಆಯ್ಕೆ

Update: 2019-11-11 18:33 GMT

ದಾವಣಗೆರೆ, ನ.11: ಜಿ.ಪಂ ಅಧ್ಯಕ್ಷರ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಹೊದಿಗೆರೆ ಜಿ.ಪಂ. ಕ್ಷೇತ್ರದ ಯಶೋಧಮ್ಮ ಮರುಳಪ್ಪ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.

ಬೆಂಗಳೂರು ಪ್ರಾದೇಶಿಕ ಆಯುಕ್ತ  ಹರ್ಷ ಗುಪ್ತ ಅವರು ಚುನಾವಣೆ ಸಭೆಯ ಅಧ್ಯಕ್ಷತೆ ವಹಿಸಿಕೊಂಡು ಚುನಾವಣಾ ಪ್ರಕ್ರಿಯೆ ಆರಂಭಿಸಿದರು. 
ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ.ಜಿ ಇವರು ಮಧ್ಯಾಹ್ನ 12 ರಿಂದ 1 ಗಂಟೆವರೆಗೆ ಉಮೇದುವಾರರಿಂದ ನಾಮಪತ್ರ ಸ್ವೀಕರಿಸಿದರು. ಒಬ್ಬರೇ ಉಮೇದುವಾರರಿಂದ ಒಟ್ಟು ಎರಡು ನಾಮಪತ್ರಗಳನ್ನು ಸಲ್ಲಿಸಿದ್ದ ನಾಮಪತ್ರ ಸ್ವೀಕರಿಸಲಾಗಿದೆ ಎಂದರು. 

ಹೊದಿಗೆರೆ ಜಿ.ಪಂ ಕ್ಷೇತ್ರದ ಸದಸ್ಯರಾದ ಯಶೋಧಮ್ಮ ಮರುಳಪ್ಪ ಇವರು ಎರಡು ನಾಮಪತ್ರ ಸಲ್ಲಿಸಿದ್ದು ಮೊದಲನೇ ನಾಮಪತ್ರಕ್ಕೆ ಸದಸ್ಯರಾದ ಕೆ.ವಿ.ಶಾಂತಕುಮಾರಿ, ಎರಡನೇ ನಾಮಪತ್ರಕ್ಕೆ ಸದಸ್ಯ ಬಿ.ಎಂ.ವಾಗೀಶ್‍ಸ್ವಾಮಿ ಸೂಚಕರಾಗಿದ್ದರು. 

ಜಿ.ಪಂ ನಲ್ಲಿ ಒಟ್ಟು 29 ಸದಸ್ಯರ ಬಲವಿದ್ದು, 16 ಕೋರಂ ಅವಶ್ಯಕತೆ ಇದ್ದು, ಅಗತ್ಯವಾದ  ಕೋರಂ ಇತ್ತು. ಅಭ್ಯರ್ಥಿ ನಾಮಪತ್ರ ವಾಪಾಸ್ ತೆಗೆದುಕೊಳ್ಳಲು ಕಾಲಾವಕಾಶ ನೀಡಿತ್ತು. ಅಭ್ಯರ್ಥಿ ನಾಮಪತ್ರ ಹಿಂತೆಗೆದುಕೊಳ್ಳದ ಕಾರಣ ಏಕೈಕ ಉಮೇದುವಾರರಾದ ಯಶೋಧಮ್ಮ ಮರುಳಪ್ಪ ಅವರನ್ನು ಜಿ.ಪಂ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಾದೇಶಿಕ ಆಯುಕ್ತರು ಸಭೆಯಲ್ಲಿ ಘೋಷಿಸಿದರು.

ಸಭೆಯಲ್ಲಿ ಜಿ.ಪಂ ಸದಸ್ಯರು, ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಜಿ.ಪಂ. ಉಪಕಾರ್ಯದರ್ಶಿ ಆನಂದ್ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.
ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಸದಸ್ಯರು ಇತರೆ ಮುಖಂಡರು ನೂತನ ಅಧ್ಯಕ್ಷರಿಗೆ ಅಭಿನಂದಸಿದರು.

ನೂತನ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಮಾತನಾಡಿ, ಜಿ ಪಂ ವತಿಯಿಂದ ರೈತಪರವಾದ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು, ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಉತ್ತಮ ರಸಗೊಬ್ಬರ, ಕೃಷಿಹೊಂಡಗಳ ನಿರ್ಮಾಣ, ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು. ಹಾಗೂ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಸೇರಿದಂತೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News