ಕೈಗಾರಿಕಾ ಉತ್ಪಾದನೆ ಪಾತಾಳಕ್ಕೆ: ಎಂಟು ವರ್ಷಗಳಲ್ಲೇ ಕನಿಷ್ಠ

Update: 2019-11-12 03:25 GMT

ಹೊಸದಿಲ್ಲಿ, ನ.12: ದೇಶದ ಕೈಗಾರಿಕಾ ಉತ್ಪಾದನೆ ಪ್ರಮಾಣ ಎಂಟು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಆರ್ಥಿಕ ಹಿಂಜರಿತಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಹೊಸ ಒತ್ತಡದಲ್ಲಿ ಸರ್ಕಾರ ಸಿಲುಕಿದೆ. ಬಂಡವಾಳ ಸರಕು, ಉತ್ಪಾದನೆ, ಗಣಿಗಾರಿಕೆ ಮತ್ತು ವಿದ್ಯುತ್ ವಲಯದಲ್ಲಿ ಗಣನೀಯ ಕುಸಿತ ಕಂಡುಬಂದಿದೆ.

ರಾಷ್ಟ್ರೀಯ ಅಂಕಿ-ಸಂಖ್ಯೆಗಳ ಕಚೇರಿ (ಎನ್‌ಎಸ್‌ಓ) ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಇಳಿಕೆ ಪ್ರಮಾಣ ಸೆಪ್ಟೆಂಬರ್‌ನಲ್ಲಿ 4.3% ಇದೆ. ಆಗಸ್ಟ್‌ನಲ್ಲಿ 1.4% ಕುಸಿತ ಕಂಡ ಬಳಿಕ ಇದೀಗ ಸತತ ಎರಡನೇ ತಿಂಗಳು ಕೂಡಾ ಸೂಚ್ಯಂಕ ಕುಸಿತವಾಗಿದೆ. ಈ ವರ್ಷ ಆರಂಭದಲ್ಲಿ ನಿಗದಿಪಡಿಸಿದ 4.6% ಉತ್ಪಾದನೆ ಹೆಚ್ಚಳ ಗುರಿಗಿಂತಲೂ ಇದು ಕಡಿಮೆ. ಎಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಈ ವಲಯ ವಾರ್ಷಿಕ 1.3% ಪ್ರಗತಿಯಾಗಿದ್ದು, ಹಿಂದಿನ ವರ್ಷದ ಈ ಅವಧಿಯಲ್ಲಿ 5.2% ಪ್ರಗತಿಯಾಗಿತ್ತು.

2011-12ರ ಸರಣಿಯಲ್ಲಿ ಇದು ಅತ್ಯಂತ ಕನಿಷ್ಠ ಮಾಸಿಕ ಪ್ರಗತಿಯಾಗಿದ್ದು, 2012ರ ನವೆಂಬರ್‌ನಲ್ಲಿ 1.7% ಇಳಿಕೆಯಾಗಿತ್ತು. ಆದರೆ ಮಾಪನಾ ವಿಧಾನ ಬದಲಾವಣೆಯಾದ ಹಿನ್ನೆಲೆಯಲ್ಲಿ ಇದನ್ನು 2004-05ರ ಸರಣಿಗೆ ಹೋಲಿಸುವಂತಿಲ್ಲ. 2011ರ ಅಕ್ಟೋಬರ್‌ನಲ್ಲಿ ಶೇಕಡ 5ರಷ್ಟು ಗಣನೀಯ ಇಳಿಕೆ ಉಂಟಾದ ಬಳಿಕ ಇದು ತೀರಾ ಕನಿಷ್ಠ ಪ್ರಮಾಣವಾಗಿದೆ.

ಕೈಗಾರಿಕಾ ಉತ್ಪಾದನೆ ಸೂಚ್ಯಂಕಕ್ಕೆ ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಶುದ್ಧೀಕರಣ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಹೀಗೆ ಎಂಟು ಪ್ರಮುಖ ವಲಯಗಳ ಕೊಡುಗೆ ಶೇಕಡ 40ರಷ್ಟು ಇದ್ದು, ಎಲ್ಲ ವಲಯಗಳಲ್ಲಿ ಎಂಟು ವರ್ಷಗಳಲ್ಲೇ ಗರಿಷ್ಠ ಕುಸಿತ ದಾಖಲಾದ ಹಿನ್ನೆಲೆಯಲ್ಲಿ ಸೂಚ್ಯಂಕ ಇಳಿಕೆಯ ಮೂಲಕ ತೀವ್ರ ಆರ್ಥಿಕ ಹಿಂಜರಿತದ ಲಕ್ಷಣ ಕಾಣಿಸಿಕೊಂಡಿದೆ. ಈ ವಲಯಗಳಲ್ಲಿ 5.2% ಕುಸಿತ ದಾಖಲಾಗಿದ್ದು, ಇದು 2011-12ರ ಸರಣಿಯಲ್ಲಿ ಗರಿಷ್ಠ ಪ್ರಮಾಣದ ಕುಸಿತವಾಗಿದೆ.

ಕೈಗಾರಿಕೆಗಳ ಮಾನದಂಡದಲ್ಲಿ 23 ಕೈಗಾರಿಕಾ ಸಮೂಹಗಳ ಪೈಕಿ 17 ಗುಂಪುಗಳಲ್ಲಿ ಕುಸಿತ ದಾಖಲಾಗಿದೆ. ವಾಹನಗಳ ಉತ್ಪಾದನೆ ಶೇಕಡ 24.8ರಷ್ಟು ಕುಸಿದಿದ್ದರೆ, ಪೀಠೋಪಕರಣಗಳ ಉತ್ಪಾದನೆ ಶೇಕಡ 22ರಷ್ಟು ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News