ಮಹಾರಾಷ್ಟ್ರದ ನಂತರ ಜಾರ್ಖಂಡ್‍ ನಲ್ಲೂ ಬಿಜೆಪಿಗೆ ಆಘಾತ ನೀಡಿದ ಮಿತ್ರಪಕ್ಷಗಳು

Update: 2019-11-12 07:43 GMT

ಹೊಸದಿಲ್ಲಿ, ನ.12: ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಸೇರಿ ಸರಕಾರ ರಚಿಸಲು ವಿಫಲವಾದ ನಂತರ ಬಿಜೆಪಿಗೆ ವಿಧಾನಸಭಾ ಚುನಾವಣೆ ನಡೆಯಲಿರುವ ಜಾರ್ಖಂಡ್ ನಲ್ಲೂ ದೊಡ್ಡ ಸವಾಲು ಎದುರಾಗಿದೆ.

ಜಾರ್ಖಂಡ್‍ನಲ್ಲಿ ಬಿಜೆಪಿ ತನ್ನ ಮಿತ್ರ ಪಕ್ಷಗಳಾದ ಚಿರಾಗ್ ಪಾಸ್ವಾನ್‍ ರ ಲೋಕ್ ಜನಶಕ್ತಿ ಪಾರ್ಟಿ (ಎಲ್‍ಜೆಪಿ) ಹಾಗೂ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‍ಯು)  ಇವುಗಳಿಂದ ಸೀಟು ಹಂಚಿಕೆ ವಿಚಾರದಲ್ಲಿ ಒತ್ತಡ ಎದುರಿಸುತ್ತಿದೆ. ನವೆಂಬರ್ 30ರಿಂದ ಐದು ಹಂತಗಳಲ್ಲಿ ಜಾರ್ಖಂಡ್ ಚುನಾವಣೆ ನಡೆಯಲಿದೆ.

2014ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ಎಲ್‍ ಜೆಪಿ ಈ ಬಾರಿ ಎಲ್ಲಾ 50 ಸೀಟುಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಪಕ್ಷ ಈ ಹಿಂದೆ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಅವಕಾಶ ಕೇಳಿತ್ತು.

ಅತ್ತ ರಾಜ್ಯದಲ್ಲಿ ಸಾಕಷ್ಟು ಬೆಂಬಲ ಹೊಂದಿರುವ ಎಜೆಎಸ್‍ಯು ಕಳೆದ ಬಾರಿ ಸ್ಪರ್ಧಿಸಿದ್ದ ಎಂಟು ಕ್ಷೇತ್ರಗಳ ಪೈಕಿ ಐದರಲ್ಲಿ ಜಯ ಸಾಧಿಸಿತ್ತು. ಈ ಬಾರಿ ಬಿಜೆಪಿ ತನ್ನ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ್ ಗಿಲುವ ಅವರನ್ನು ಕಣಕ್ಕಿಳಿಸಲಿರುವ ಚಕ್ರಧರಪುರ್ ಕ್ಷೇತ್ರದಿಂದ ಎಜೆಎಸ್‍ಯು ತನ್ನ ಅಭ್ಯರ್ಥಿಯನ್ನು ನಿಲ್ಲಿಸಿ ಬಿಜೆಪಿಗೆ ಸಡ್ಡು ಹೊಡೆದಿದೆ.

ಈ ಬಾರಿ ತನಗೆ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನಿಡಬೇಕೆಂದು ಎಜೆಎಸ್‍ಯು ಕೇಳಿದ್ದರೆ ಬಿಜೆಪಿ ಒಂಬತ್ತಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅವಕಾಶ ನಿರಾಕರಿಸಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 72 ಸ್ಥಾನಗಳಿಗೆ ಸ್ಪರ್ಧಿಸಿದ್ದರೆ, ಎಜೆಎಸ್‍ಯು ಎಂಟು ಸ್ಥಾನಗಳಿಗೆ, ಎಲ್‍ಜೆಪಿ ಒಂದು ಸ್ಥಾನದಲ್ಲಿ ಸ್ಪರ್ಧಿಸಿತ್ತು. ಬಿಜೆಪಿ 37ರಲ್ಲಿ ಗೆದ್ದಿದ್ದರೆ ಎಜೆಎಸ್‍ಯು ಐದರಲ್ಲಿ ಗೆಲುವು ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News