ಅಕ್ಷಯ ಪಾತ್ರೆ ಸಂಸ್ಥೆಗೆ ಬಿಸಿಯೂಟ ಯೋಜನೆ ನೀಡಿದ್ದಕ್ಕೆ ವಿರೋಧ: ಅಕ್ಷರ ದಾಸೋಹ ನೌಕರರ ಪ್ರತಿಭಟನೆ

Update: 2019-11-12 18:33 GMT

ಮಂಡ್ಯ, ನ.12: ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆ ಫೌಂಡೇಷನ್‍ಗೆ ಅಕ್ಷರ ದಾಸೋಹ ಯೋಜನೆ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಮೆರವಣಿಗೆ ಹೊರಟು ಜಿಲ್ಲಾ ಪಂಚಾಯತ್ ಕಾರ್ಯನಿರ್ವಕಾಧಿಕಾರಿಗೆ ಮನವಿ ಸಲ್ಲಿಸಿ ಧರಣಿ ನಡೆಸಿದ ಅವರು, ಸರಕಾರ, ಜಿಲ್ಲಾಡಳಿತ ಹಾಗೂ ಸಂಸದೆ ಸುಮಲತಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಹತ್ವದ ಬಿಸಿಯೂಟ ಯೋಜನೆಯಿಂದ ಬಡ, ಅಸಂಘಟಿತ ಕೂಲಿಕಾರ್ಮಿಕರ ಮಕ್ಕಳಿಗೆ ಪೌಷ್ಠಿಕ ಆಹಾರ ದೊರೆಯುತ್ತಿದೆ. ಜತೆಗೆ, ಯೋಜನೆಯಲ್ಲಿ ಬಡ ಮಹಿಳೆಯರಿಗೆ ಉದ್ಯೋಗ ಸಿಕ್ಕಿದೆ. ಆದರೆ, ಸರಕಾರದ ಈ ಕ್ರಮದಿಂದ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಅವರು ಕಿಡಿಕಾರಿದರು.

ಯೋಜನೆ ಜಾರಿಯಾದ ನಂತರ ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಕ್ರಿಯಾಶೀಲವಾಗಿ ಭಾಗವಹಿಸುವಿಕೆ ಹೆಚ್ಚಾಗಿದೆ. ಇಂತಹ ಫಲಿತಾಂಶಕ್ಕೆ ಕಾರಣ ಬಿಸಿಯೂಟ ನೌಕರರು. ಆದರೆ, ಇಂದು ಸಮಾನ ಶಿಕ್ಷಣದ ಅಡಿಪಾಯಕ್ಕೆ ವಿರೋಧವಾಗಿ ಧರ್ಮಾಧಾರಿತವಾದ ಸಂಸ್ಥೆಗಳಿಗೆ ಬಿಸಿಯೂಟ ಪೂರೈಕೆ ವಹಿಸಿರುವುದು ವಿಷಾದನೀಯ ಎಂದರು.

ಇಸ್ಕಾನ್ ಸರಬರಾಜು ಮಾಡುವ ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇರುವುದಿಲ್ಲ. ಊಟವನ್ನು ವಾಹನಗಳಲ್ಲಿ ದೂರದ ಸ್ಥಳದಿಂದ ಸರಬರಾಜು ಮಾಡುವುದರಿಂದ ಮಧ್ಯಾಹ್ನದ ವೇಳೆಗೆ ಅಂದರೆ ಮಕ್ಕಳು ಊಟ ಮಾಡುವ ಸಮಯಕ್ಕೆ ತಣ್ಣಗಾಗುತ್ತದೆ. ಇದು ಬಿಸಿಯೂಟ ಯೋಜನೆ ಉದ್ದೇಶವನ್ನೇ ನಾಶ ಮಾಡುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಸಂಘಟನೆ ಹಲವು ವರ್ಷಗಳಿಂದ ದೀರ್ಘ ಹೋರಾಟ ನಡೆಸಿ ಇಂತಹ ಧರ್ಮಾಧಾರಿತ ಮತ್ತು ಖಾಸಗೀ ಸಂಸ್ಥೆಗಳಿಗೆ ಕೊಡುವುದನ್ನು ನಿಲ್ಲಿಸಿದೆ. ಅದಾಗ್ಯೂ ಸಂಸದೆ ಸುಮಲತಾ ಅಂಬರೀಷ್ ಅವರು ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆ ಫೌಡೇಷನ್ ಮೂಲಕ ಮಂಡ್ಯ ಜಿಲ್ಲೆಯ ಬಿಸಿಯೂಟ ಯೋಜನೆಯನ್ನು ಖಾಸಗೀಯವರಿಗೆ ನೀಡಲು ಮುಂದಾಗಿರುವುದು ಮಹಿಳಾ ಕಾರ್ಮಿಕರ ವಿರೋಧಿ ನೀತಿಯಾಗಿದೆ ಎಂದು ಅವರು ಟೀಕಿಸಿದರು.

2012ರಲ್ಲಿ ಸರಕಾರ ಸುತ್ತೋಲೆ ಹೊರಡಿಸಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಹೊಸದಾಗಿ ಸೇವಾ ಸಂಸ್ಥೆಗಳಿಗೆ ವಿಸ್ತರಿಸುವುದನ್ನು ನಿಷೇಧಿಸುವ ಬಗ್ಗೆ ಎಂ.ಎಚ್.ಆರ್.ಡಿ. ನವದೆಹಲಿಯಲ್ಲಿ ಪಿಎಬಿ ಸಭೆಯಲ್ಲಿ ತೀರ್ಮಾನವಾಗಿದೆ. ಈ ರೀತಿ ಆದೇಶವಿದ್ದರೂ ಖಾಸಗಿಯವರಿಗೆ ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ಈ ಯೋಜನೆಯ ಉದ್ದೇಶವನ್ನು ಬದಿಗೊತ್ತಿ ಖಾಸಗೀಕರಣ ಮಾಡಲು ಹೊರಟಿರುವ ಜಿಲ್ಲಾಡಳಿತದ ಕ್ರಮದಿಂದ ಬಿಸಿಯೂಟ ನೌಕರರಿಗೆ ಮಾನಸಿಕವಾಗಿ ಒತ್ತಡ ಹೆಚ್ಚು ಮಾಡಲಾಗಿದೆ. ಕೂಡಲೇ ಜಿಲ್ಲಾಡಳಿತ ಈ ರೀತಿ ಖಾಸಗೀಕರಣದ ವಿಚಾರ ಕೈಬಿಟ್ಟು ಯಾವುದೇ ರೀತಿಯಲ್ಲಿ ಖಾಸಗೀಕರಣ ಮಾಡುವುದಿಲ್ಲವೆಂದು ಆದೇಶ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.

ರೈತ ನಾಯಕಿ ಸುನಂದಾ ಜಯರಾಂ, ಸಿಐಟಿಯು ಜಿಲ್ಲಾಧ್ಯಕ್ಷ ಜಿ.ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷೆ ಎಸ್.ವರಲಕ್ಷ್ಮಿ, ಜಿಲ್ಲಾಧ್ಯಕ್ಷೆ ಮಹದೇವಮ್ಮ, ಪ್ರಧಾನ ಕಾರ್ಯದರ್ಶಿ ಸುನಿತಾ, ಸುನಂದ, ಮಂಜುಳ, ಸರಸ್ವತಿ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News