ಶ್ರೀಕಾಂತ್ ಹಿಂದಿಕ್ಕಿದ ಪ್ರಣೀತ್, ಸಾತ್ವಿಕ್-ಚಿರಾಗ್ 7ನೇ ಸ್ಥಾನಕ್ಕೆ

Update: 2019-11-13 05:33 GMT

ಹೊಸದಿಲ್ಲಿ, ನ.12: ಬಿಡಬ್ಲುಎಫ್ ರ್ಯಾಂಕಿಂಗ್‌ನಲ್ಲಿ ಬ್ಯಾಡ್ಮಿಂಟನ್ ಸ್ಟಾರ್ ಕಿಡಂಬಿ ಶ್ರೀಕಾಂತ್‌ರನ್ನು ಹಿಂದಿಕ್ಕಿದ ಭಾರತೀಯ ಶಟ್ಲರ್ ಬಿ.ಸಾಯಿ ಪ್ರಣೀತ್ ಅಗ್ರ-10ರೊಳಗೆ ಪ್ರವೇಶಿಸಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಸ್ವಿಟ್ಝರ್‌ಲ್ಯಾಂಡ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ 36 ವರ್ಷಗಳ ಬಳಿಕ ಪದಕ ಜಯಿಸಿದ ಭಾರತದ ಏಕೈಕ ಶಟ್ಲರ್ ಆಗಿರುವ ಪ್ರಣೀತ್ ಇದೀಗ ಜೀವನಶ್ರೇಷ್ಠ ರ್ಯಾಂಕಿಂಗ್(10ನೇ ಸ್ಥಾನ)ತಲುಪಿದ್ದಾರೆ. ಪ್ರಣೀತ್ ಸಹ ಆಟಗಾರ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಪ್ರಣೀತ್ ಈವರ್ಷಾರಂಭದಲ್ಲಿ ಮಾರ್ಚ್‌ನಲ್ಲಿ ನಡೆದಿದ್ದ ಸ್ವಿಸ್ ಓಪನ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 26ರ ಹರೆಯದ ಪ್ರಣೀತ್ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಚೆನ್ ಲಾಂಗ್‌ರನ್ನು ಸೆಮಿ ಫೈನಲ್‌ನಲ್ಲಿ ಸೋಲಿಸಿ ಶಾಕ್ ನೀಡಿದ್ದರು. ಆದರೆ, ಫೈನಲ್‌ನಲ್ಲಿ ಚೀನಾದ ಶಿ ಯುಖಿ ವಿರುದ್ಧ 21-19, 18-21, 12-21 ಅಂತರದಿಂದ ಸೋತಿದ್ದರು. ಇದೇ ವೇಳೆ ಪುರುಷರ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಬಿಡಬ್ಲುಎಫ್ ರ್ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸಾತ್ವಿಕ್ ಹಾಗೂ ಚಿರಾಗ್ ಆಗಸ್ಟ್‌ನಲ್ಲಿ ಥಾಯ್ಲೆಂಡ್ ಓಪನ್‌ನಲ್ಲಿ ಚೊಚ್ಚಲ ಸೂಪರ್-500 ಪ್ರಶಸ್ತಿ ಜಯಿಸಿದ್ದರು. ಭಾರತದ ಸ್ಟಾರ್ ಜೋಡಿ ಫ್ರೆಂಚ್ ಓಪನ್ ಸೂಪರ್ 750ರಲ್ಲಿ ಫೈನಲ್‌ಗೆ ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News