ಮೋದಿಯ ಅಚ್ಛೇ ದಿನ್ ಅದಾನಿ, ಅಂಬಾನಿ ಪಾಲಾಗಿದೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್

Update: 2019-11-13 18:33 GMT

ಚಿಕ್ಕಮಗಳೂರು, ನ.13: ಬಿಜೆಪಿ ನೇತೃತ್ವದ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರಕಾರ ಆರೆಸ್ಸೆಸ್‍ನ ಹಿಡನ್ ಅಜೆಂಡಾಗಳನ್ನು ದೇಶದಲ್ಲಿ ಹಂತ ಹಂತವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಹುನ್ನಾರ ನಡೆಸುತ್ತಿದೆ. ಇಂತಹ ಸರಕಾರಕ್ಕೆ ರೈತರು, ಕಾರ್ಮಿಕರು, ಬಡವರು ಸೇರಿದಂತೆ ದೇಶದ ಶ್ರೀಸಾಮಾನ್ಯರ ಬದುಕಿನ ಪ್ರಶ್ನೆಗೆ ಕಿಂಚಿತ್ ಕಾಳಜಿ ಇಲ್ಲ. ಅಚ್ಛೇ ದಿನ್ ಬಂದಿದೆ ಎಂದು ಸದಾ ಹೇಳಿಕೊಳ್ಳುವ ಮೋದಿ ಪಟಾಲಂ ಅದಾನಿ, ಅಂಬಾನಿಯಂತಹ ಬಂಡವಾಳಶಾಹಿಗಳಿಗೆ ಮಾತ್ರ ಅಚ್ಛೇ ದಿನ್ ಭಾಗ್ಯ ಕರುಣಿಸುತ್ತಿದೆ. ರಾಜ್ಯದ ಬಿಜೆಪಿ ಸರಕಾರ ಕೂಡ ಕೇಂದ್ರದ ಮುಖಂಡರ ಅಣತಿಯಂತೆ ಆಡಳಿತ ನಡೆಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಟೀಕಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯದ ಆಡಳಿತಾರೂಢ ಬಿಜೆಪಿ ಸರಕಾರಗಳ ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ ಧರಣಿ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಆಜಾದ್ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರಧಾನಿ ಮೋದಿಯವರ ಘೋಷಣೆಗಳು, ನೀಡಿದ ಭರವಸೆಗಳು ಇದುವರೆಗೂ ಈಡೇರಿಲ್ಲ. ಅವರು ಹೇಳಿದ ಅಚ್ಛೇ ದಿನ್ ಅದಾನಿ ಅಂಬಾನಿಗಳ ಪಾಲಾಗಿದ್ದು, ದೇಶದ ಸಾಮಾನ್ಯ ವರ್ಗದ ಜನರು ಕೆಟ್ಟ ಆರ್ಥಿಕ ನೀತಿಗಳ ಪರಿಣಾಮವಾಗಿ ಬೀದಿಗೆ ಬಂದು ನಿಲ್ಲುತ್ತಿದೆ ಎಂದು ಅವರು ಆರೋಪಿಸಿದರು. 

ಕೇಂದ್ರ ಸರಕಾರ ಈ ಹಿಂದೆ ಜಾರಿಗೊಳಿಸಿದ ನೋಟು ನಿಷೇಧ ನೀತಿ, ಜಿಎಸ್‍ಟಿ ನೀತಿಯ ಅವೈಜ್ಞಾನಿಕ ಜಾರಿಯಿಂದಾಗಿ ಅವರು ಜಾರಿಗೊಳಿಸಿರುವ ದೇಶದ ಆರ್ಥಿಕತೆ ಭಾರೀ ತೊಂದರೆ ಅನುಭವಿಸಿದ್ದು, ದೇಶದ ಜಿಡಿಪಿ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿದೆ. ಇಂತಹ ಆರ್ಥಿಕ ನೀತಿಗಳಿಂದಾಗಿ ರೈತರು, ವ್ಯಾಪಾರಿಗಳು, ಸಣ್ಣ ಸಣ್ಣ ಉದ್ದಿಮೆದಾರರು, ಬಡವರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದ ಅವರು, ರೈತರಿಗೆ ಮಾರಕವಾಗಿದ್ದ ಆರ್.ಸಿ.ಇ.ಪಿ ಒಪ್ಪಂದದ ವಿರುದ್ಧ ಕಾಂಗ್ರೆಸ್ ಸೇರಿದಂತೆ ರೈತ ಸಂಘಟನೆಗಳು ದೇಶಾದ್ಯಂತ ಧರಣಿ ನಡೆಸಿದ ಪರಿಣಾಮ ಆ ಒಪ್ಪಂದಕ್ಕೆ ಕೇಂದ್ರ ಸರಕಾರ ಸಹಿ ಹಾಕಲಿಲ್ಲ. ಈ ಸಂಬಂಧ ಕೇಂದ್ರ ಸರಕಾರ ನಾಟಕವಾಡುತ್ತಿದ್ದು, ಈ ಒಪ್ಪಂದವಾದಲ್ಲಿ ದೇಶದ ರೈತರು ಸಾವಿನ ಶೂಲಕ್ಕೇರಬೇಕಾಗುತ್ತದೆ. ಈ ಸಂಬಂಧ ರೈತರು ಸದಾ ಎಚ್ಚರದಿಂದಿರಬೇಕೆಂದರು.

ಬೇಟಿ ಪಡಾವೋ, ಬೇಟಿ ಬಚಾವೋ ಎಂದು ಕೇಂದ್ರ ಸರಕಾರ ಘೋಷಣೆ ಹಾಕುತ್ತಿದೆ. ಆದರೆ ಬಿಜೆಪಿ ಮುಖಂಡರಿಂದಲೇ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳಾಗುತ್ತಿವೆ ಎಂದು ಆರೋಪಿಸಿದ ಅವರು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಹಿಳಾ ದೌರ್ಜನ್ಯಗಳ ಬಗ್ಗೆ ಪ್ರತಿಭಟನೆ ನಡೆಸುವ ಸಂಸದೆ ಶೋಭಾ ಕರಂದ್ಲಾಜೆ ಅವರದ್ದೇ ಕ್ಷೇತ್ರದ ಭಾಗವಾಗಿರುವ ಬಾಳೆಹೊನ್ನೂರಿನಲ್ಲಿ ಇತ್ತೀಚೆಗೆ ಯುವತಿಯೋರ್ವಳ ಮೇಲೆ ದೌರ್ಜನ್ಯವಾದ ಸಂದರ್ಭದಲ್ಲಿ ಕಾಣೆಯಾಗಿದ್ದರು. ಈ ಘಟನೆಯಲ್ಲಿ ಅಲ್ಪಸಂಖ್ಯಾತರು ಆರೋಪಿಗಳಲ್ಲದಿರುವುದರಿಂದ ಸಂಸದೆ ಶೋಭಾ ಅವರಿಗೆ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಇತ್ತ ತಲೆ ಹಾಕಿಲ್ಲ ಎಂದು ಅವರು ಆರೋಪಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಚಿಕ್ಕಮಗಳೂರು ಸಂಸದೀಯ ಕ್ಷೇತ್ರದಿಂದ 2 ಬಾರಿ ಸಂಸದರಾಗಿ ಆಯ್ಕೆಗೊಂಡಿರುವ ಶೋಭಾ ಕರಂದ್ಲಾಜೆ ಕ್ಷೇತ್ರದ ಜನರ ಹಿತವನ್ನು ಕಡೆಗಣಿಸಿದ್ದಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಜನ ಸಂಕಷ್ಟದಲ್ಲಿದ್ದಾರೆ. ಆದರೆ ಅವರ ಸಮಸ್ಯೆಗಳನ್ನು ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡುವಲ್ಲಿ ಅವರು ವಿಫಲರಾಗಿದ್ದಾರೆ. ದೇಶ ವಿದೇಶದ ಪ್ರವಾಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ನೆರೆ ಮತ್ತು ಅತಿವೃಷ್ಟಿಯಿಂದ ಸಂಕಷ್ಟಕ್ಕೊಳಗಾಗಿರುವ ಕರ್ನಾಟಕ ರಾಜ್ಯ ಕಾಣಿಸಲಿಲ್ಲ. ಕೇಂದ್ರ ಸರಕಾರ ರಾಜ್ಯ ನೀಡಿದ ಅತಿವೃಷ್ಟಿ ಪರಿಹಾರ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗುದೆ ಎಂದು ಹರಿಹಾಯ್ದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಮುಹಮ್ಮದ್ ಮಾತನಾಡಿ, ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಸರಕಾರ ಅಭಿವೃದ್ದಿ ವಿಚಾರಗಳ ಆಧಾರದಲ್ಲಿ ವಿಚಾರಗಳನ್ನು ಮಾತನಾಡುವುದಿಲ್ಲ. ಅವರು ಭಾವನಾತ್ಮಕ ವಿಚಾರಗಳಿಂದ ದೇಶವನ್ನು ಕಟ್ಟುವ ಭ್ರಮೆಯಲ್ಲಿದ್ದಾರೆ. ಇಂತಹ ಭಾವನಾತ್ಮಕ ವಿಚಾರಗಳಿಂದ ದೇಶದ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಬಿಜೆಪಿ ಪಕ್ಷ ಎಂತಹ ಕಪಟಿಗಳ ಪಕ್ಷವೆಂಬುದು ಈಗಾಗಲೇ ಜನರಿಗೆ ಮನವರಿಕೆಯಾಗುತ್ತಿದೆ ಎಂದು ಟೀಕಿಸಿದ ಅವರು, ರಾಜ್ಯದಿಂದ 25 ಸಂಸದರು ಆಯ್ಕೆಯಾಗಿದ್ದಾರೆ. ಅವರಿಗೆ ರಾಜ್ಯದ ಜನರ ಬಗ್ಗೆ ಕಾಳಜಿಯಿದ್ದರೆ ರಾಜ್ಯದ ಸಮಸ್ಯೆಗಳನ್ನು ಮೋದಿಯವರ ಎದುರು ನಿಂತು ರಾಜ್ಯದ ಸಮಸ್ಯೆಗಳನ್ನು ಹೇಳಲಿ ಎಂದು ಸವಾಲೆಸೆದರು.

ಕೆಪಿಸಿಸಿ ಮುಖಂಡ ಎಂ.ಎಲ್.ಮೂರ್ತಿ ಮಾತನಾಡಿ, ಕಾಂಗ್ರೆಸಿಗರ ಹಲವು ತಪ್ಪುಗಳಿಂದ ಆಲಿಬಾಬಾ ಮತ್ತು 40 ಮಂದಿ ಕಳ್ಳರ ತಂಡ ದೇಶದಲ್ಲಿ ಅಧಿಕಾರಕ್ಕೆ ಬಂದಿದೆ. ನರೇಂದ್ರಮೋದಿ ಜನರ ಆಧಮ್ಯ ಅಭಿಮಾನವನ್ನು ದುರುಪಯೋಗಪಡಿಸಿಕೊಂಡು ಸರ್ವಾಧಿಕಾರಿಯಾಗಿದ್ದಾರೆ. ಬ್ರೀಟಿಷರು ದೇಶದ ಜನರಿಗೆ ತಿಳಿಯದಂತೆ ಲೂಟಿ ಮಾಡಿದ್ದರು. ಆದರೆ ಬಿಜೆಪಿಗರು ದೇಶದ ಜನತೆಗೆ ತಿಳಿಯುವಂತೆಯೇ ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದ್ದಾರೆ. ಇಂತಹ ಲೂಟಿಕೋರ ಪಕ್ಷದವರ ಬಗ್ಗೆ ಮತದಾರರು ಜಾಗೃತರಾಗಬೇಕು ಎಂದು ಹೇಳಿದರು.

ಪಕ್ಷದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ್ ಮಾತನಾಡಿ, ಕರ್ನಾಟಕದಲ್ಲಿ ಸಂಭವಿಸಿದ ಅತಿವೃಷ್ಟಿಗೆ ಕೇವಲ 1200ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರಕಾರದ ಖಜಾನೆ ಖಾಲಿಯಾಗಿ ತುರ್ತು ಪರಿಸ್ಥಿತಿ ಸಂದರ್ಭಕ್ಕೆ ಮೀಸಲಿಟ್ಟಿದ್ದ ಹಣವನ್ನು ನೆರೆ ಪರಿಹಾರಕ್ಕೆ ನೀಡಿದ್ದಾರೆ ಎಂದ ಅವರು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಗೆ ತರಲು ಮಾಜಿ ಪ್ರಧಾನಿ ಮನಮೋಹನ್‍ಸಿಂಗ್‍ರನ್ನು ಆರ್ಥಿಕ ಸಮಿತಿಯ ಸದಸ್ಯರನ್ನಾಗಿ ನೇಮಿಸುವ ಅನಿವಾರ್ಯತೆ ಎದುರಾಗಿರುವುದು ದುರುದೃಷ್ಟಕರ. ಮೌನಿಸಿಂಗ್ ಎನ್ನುತ್ತಿದ್ದವರೇ ಸಿಂಗ್ ಕಾಲಿನ ಬಳಿ ಹೋಗಿರುವುದು ಬಿಜೆಪಿಯವರ ಭೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಜರಿದರು.

ಧರಣಿಯಲ್ಲಿ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಮಾಜಿ ಸದಸ್ಯೆ ಸವಿತಾರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಸಿ.ಎನ್ ಅಕ್ಮಲ್, ರಸೂಲ್‍ಖಾನ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News