ಹನೂರು: ಶಾಶ್ವತ ಕುಡಿಯುವ ನೀರು ಹಾಗೂ ಕೆರೆಗೆ ನೀರು ತುಂಬಿಸುವ ಯೋಜನೆಯ ಪೂರ್ವಭಾವಿ ಸಭೆ

Update: 2019-11-13 18:40 GMT

ಹನೂರು, ನ.13: ಬಹುಗ್ರಾಮ ಶಾಶ್ವತ ಕುಡಿಯುವ ನೀರಿನ ಯೋಜನೆ ಮತ್ತು ಕೆರೆಗೆ ನೀರು ತುಂಬಿಸುವ ಯೋಜನೆ ಕ್ಷೇತ್ರದ ಎಲ್ಲಾ ಜನರಿಗೆ ಉಪಯೋಗಕ್ಕೆ ಬರಲಿದ್ದು, ಈ ಮಹತ್ತರ ಯೋಜನೆಗೆ ಇದೆ ತಿಂಗಳು 23 ರಂದು ಜಿಲ್ಲೆಯ ಉಸ್ತುವಾರಿ ಸಚಿವ ಮತ್ತು ಶಿಕ್ಷಣ ಖಾತೆ ಸಚಿವ ಸುರೇಶ್‍ ಕುಮಾರ್, ಸಚಿವ ಈಶ್ವರಪ್ಪ, ಲೋಕಸಭಾ ಸದಸ್ಯ ಶ್ರೀನಿವಾಸ ಪ್ರಸಾದ್‍ರವರು ಚಾಲನೆ ನೀಡಲಿದ್ದಾರೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು 

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಮತ್ತು ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಹುಗ್ರಾಮ ಶಾಶ್ವತ ಕುಡಿಯುವ ನೀರು ಯೋಜನೆ ಮತ್ತು ಕೆರೆಗೆ ನೀರು ತುಂಬಿಸುವ ಯೋಜನೆ ಕ್ಷೇತ್ರದ ಎಲ್ಲಾ ಜನರಿಗೆ ಉಪಯೋಗಕ್ಕೆ ಬರಲಿದ್ದು, ಜನರು ಪಕ್ಷಾತೀತರಾಗಿ ಈ  ಕಾಮಗಾರಿ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಹೇಳಿದರು. ಈ ಎರಡು ಬೃಹತ್ ಯೋಜನೆಗಳಿಂದಾಗಿ ಕ್ಷೇತ್ರದ ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ನೀಗಲಿದೆ ಮತ್ತು ಕೃಷಿ ಮಾಡಲು ರೈತರಿಗೆ ಉಪಯೋಗವಾಗಲಿದೆ. ಈ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ, ರಾಜಕೀಯ ಶಾಶ್ವತವಲ್ಲ. ಅಧಿಕಾರ ಇಂದು ಇರುತ್ತದೆ ನಾಳೆ ಹೋಗುತ್ತದೆ. ಆದರೆ ಯೋಜನೆಗಳು ಮತ್ತು ಅದರ ಫಲ ಶಾಶ್ವತವಾಗಿ ಇರುತ್ತದೆ ಎಂದು ಹೇಳಿದರು.

ಕನಸಿನ ಯೋಜನೆ: ನಾನು ಮೂರನೇ ಭಾರಿ ಹನೂರಿನ ಶಾಸಕನಾಗಿ ಆಯ್ಕೆಯಾಗಿದ್ದು, ಮೊದಲಿನಿಂದಲೂ ಹನೂರು ಕ್ಷೇತ್ರ ಮಳೆ ಆಶ್ರಯಿತ ಮತ್ತು ಅಂತರ್ಜಲ ಕಡಿಮೆ ಇರುವ ಪ್ರದೇಶವಾಗಿದ್ದು, ಈ ಭಾಗದ ಗ್ರಾಮಗಳ ಜನರಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸಬೇಕು. ಇಲ್ಲಿನ ಡ್ಯಾಮ್‍ಗಳಿಗೆ ಕೆರೆ ನೀರು ತುಂಬಿಸುವ ಯೋಜನೆಯನ್ನು ತರಬೇಕು ಎಂದು ಕನಸು ಕಂಡಿದ್ದೆ ಈ ಕನಸಿಗೆ ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅನುಮೋದನೆ ನೀಡಿದರು ಎಂದರು.

ಬಹು ಗ್ರಾಮ ಶಾಶ್ವತ ಕುಡಿಯುವ ನೀರುಯೋಜನೆ: ಹನೂರು ವಿಧಾನಸಭಾ ಕ್ಷೇತ್ರದ ಒಟ್ಟು 276 ಹಳ್ಳಿಗಳಿಗಳಿಗೆ ಸಮಾರು 427 ಕೋಟಿ ರೂ. ಗಳ ಶಾಶ್ವತ ಕುಡಿಯುವ ನೀರಿನ ಬೃಹತ್‍ ಯೋಜನೆಯಾಗಿದ್ದು, ಮೊದಲನೆ ಹಂತದಲ್ಲಿ 98 ಹಳ್ಳಿಗಳಿಗೆ ಸುಮಾರು 200 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಈ ಹಂತದಲ್ಲಿ ಪ್ರಮುಖವಾಗಿ ಸತ್ತೆಗಾಲ, ಧನಗೆರೆ, ಪಾಳ್ಯ, ಮಂಗಲ, ಹನೂರು, ಮಣಗಳ್ಳಿ, ಬಂಡಳ್ಳಿ, ಶಾಗ್ಯ, ಗಾಣಿಗಮಂಗಲ ಮುಂತಾದ ಹಳ್ಳಿಗಳಿಗೆ ಮತ್ತು ಎರಡನೆ ಹಂತದಲ್ಲಿ 178 ಹಳ್ಳಿಗಳಿಗೆ ಯೋಜನೆ ವಿಸ್ತರಿಸಲಾಗುವುದು ಹಾಗೂ ಎರಡನೆ ಹಂತದ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಅಂದೇ ಮನವಿ ಮಾಡಲಾಗುವುದು ಎಂದು ಹೇಳಿದರು.

ಕೆರೆಗೆ ನೀರು ತುಂಬಿಸುವ ಯೋಜನೆ: 133 ಕೋಟಿ ರೂಗಳ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಹನೂರು ಕ್ಷೇತ್ರದ ರಾಮನಗುಡ್ಡೆ, ಹುಬ್ಬೆಹುಣಸೆ ಜಲಾಶಯ, ಗುಂಡಾಲ್ ಜಲಾಶಯಗಳಿಗೆ ನೀರು ತುಂಬಿಸುವ ಯೋಜನೆಗೂ ಚಾಲನೆ ನೀಡಲಾಗುತ್ತಿದ್ದು. ಈ ಯೋಜನೆಯಿಂದಾಗಿ ಸುಮಾರು 28 ರಿಂದ 30 ಸಾವಿರ ಏಕರೆ ವ್ಯಾಪ್ತಿಯ ರೈತರಿಗೆ ಕೃಷಿ ಮಾಡಲು ನೀರಿನ ಲಭ್ಯತೆ ಸಿಗುತ್ತದೆ ಮತ್ತು ಈ ಭಾಗಗಳಲ್ಲಿರುವ ಬೋರ್ ವೆಲ್ ಗಳ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದು ಹೇಳಿದರು.

ಕೆಶಿಪ್ ಯೋಜನೆಯ ರಸ್ತೆ ಅಭಿವೃದ್ದಿಗೆ ಶೀಘ್ರದಲ್ಲಿ ಪ್ರಾರಂಭ: ಸುಮಾರು 108 ಕೋಟಿ ವೆಚ್ಚದ 23 ಕಿ.ಮೀ ಕೊಳ್ಳೇಗಾಲ- ಹನೂರುರಾಜ್ಯ ಹೆದ್ದಾರಿ ಕಾಮಗಾರಿ ಕೆಸಿಪ್ ಯೋಜನೆಯಡಿ ಅಭಿವೃದ್ದಿಯ ಕಾಮಗಾರಿಯೂ ಶೀಘ್ರದಲ್ಲಿ ಪ್ರಾರಂಭವಾಗುತ್ತದೆ. ರಸ್ತೆ ಬದಿಯಲ್ಲಿರುವ ಮರಗಳ ಕಟಾವು ಮಾಡಲು ಅನುಮತಿ ಕೋರಿ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದ್ದು, ಒಂದು ವಾರದಲ್ಲಿ ಅನುಮೋದನೆ ದೊರಕಲಿದೆ. ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News