ವಿದ್ಯಾರ್ಥಿ-ವಿದ್ಯಾರ್ಥಿನಿಯ ಮೇಲೆ ಹಲ್ಲೆ ಆರೋಪ: ನಾಲ್ವರ ಬಂಧನ

Update: 2019-11-13 18:46 GMT

ಶಿವಮೊಗ್ಗ, ನ. 13: ಒಂದೇ ಕಾಲೇಜ್‍ನ ಅನ್ಯ ಧರ್ಮೀಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆನ್ನಲಾದ ಘಟನೆಗೆ ಸಂಬಂಧಿಸಿದಂತೆ, ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರು ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಮಂಡಗದ್ದೆ ಗ್ರಾಮದ ನಿವಾಸಿಗಳಾದ ಸೈಯದ್ ಸಾದಿಕ್ (22), ಮಹಮ್ಮದ್ ಹನೀಫ್ (23), ಮಹಮ್ಮದ್ ರಿಝ್ವಾನ್ (22) ಹಾಗೂ ಸೈಯದ್ ಇಜಾಜ್ (23) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಮಂಗಳವಾರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್ನೂ 10 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಘಟನೆಯ ವೀಡಿಯೋ ದೃಶ್ಯಾವಳಿಯ ಆಧಾರದ ಮೇಲೆ ಇವರ ಸುಳಿವು ಪತ್ತೆ ಹಚ್ಚಿರುವ ಪೊಲೀಸರು, ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ. ಡಿವೈಎಸ್‍ಪಿ ಪಿ. ರವಿಕುಮಾರ್ ನೇತೃತ್ವದ ಪೊಲೀಸ್ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ. 

ಘಟನೆ ಹಿನ್ನೆಲೆ: ಹಲ್ಲೆಗೊಳಗಾದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯು ಅನ್ಯ ಧರ್ಮಕ್ಕೆ ಸೇರಿದವರಾಗಿದ್ದಾರೆ. ಶಿವಮೊಗ್ಗ ನಗರದ ಕಾಲೇಜ್‍ವೊಂದರಲ್ಲಿ ಅಭ್ಯಾಸ ನಡೆಸುತ್ತಿದ್ದರು. ಪಠ್ಯದ ಪ್ರಾಜೆಕ್ಟ್ ವರದಿ ಸಿದ್ದಪಡಿಸಲು ಮಂಡಗದ್ದೆ ಪಕ್ಷಿಧಾಮಕ್ಕೆ ಆಗಮಿಸಿದ್ದರು. ಈ ವೇಳೆ ಸ್ಥಳೀಯ ಯುವಕರ ಗುಂಪೊಂದು ಆಗಮಿಸಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ವಿಚಾರಣೆಗೊಳಪಡಿಸಿದೆ. ಜೊತೆಗೆ ಇಬ್ಬರ ಮೇಲೆ ಹಲ್ಲೆ ಮಾಡಿ, ಹಿಂಸಿಸಿದೆ ಎನ್ನಲಾಗಿದೆ. ಇದನ್ನು ಹಲ್ಲೆ ಮಾಡಿದವರೇ ಮೊಬೈಲ್‍ನಲ್ಲಿ ವೀಡಿಯೋ ಕೂಡ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಾಳೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಯುವಕ-ಯುವತಿಯರನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದರು. 

ಘಟನೆಯ ಕುರಿತಂತೆ ದೂರು ನೀಡಲು ವಿದ್ಯಾರ್ಥಿ-ವಿದ್ಯಾರ್ಥಿನಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಸ್ವತಃ ಪೊಲೀಸರೇ ಸ್ವಯಂಪ್ರೇರಿತ ಎಫ್‍ಐಆರ್ ದಾಖಲಿಸಿಕೊಂಡಿದ್ದರು. ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ರಚಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News