ಬಿಜೆಪಿ ನಾಯಕನ ಸಂಬಂಧಿಯೊಂದಿಗೆ ದುರ್ವರ್ತನೆ ಆರೋಪ: ಅಮೇಠಿ ಜಿಲ್ಲಾಧಿಕಾರಿಯ ಎತ್ತಂಗಡಿ

Update: 2019-11-14 14:15 GMT
ಫೋಟೋ: Twitter/DM Amethi

ಲಕ್ನೋ,ನ.14: ಅಮೇಠಿ ಜಿಲ್ಲಾಧಿಕಾರಿ ಪ್ರಶಾಂತ್ ಶರ್ಮಾ ಅವರು ಸ್ಥಳೀಯ ಬಿಜೆಪಿ ನಾಯಕ ಶಿವನಾಯಕ ಸಿಂಗ್ ಅವರ ಸಂಬಂಧಿ ಸುನಿಲ್ ಸಿಂಗ್ ಜೊತೆ ವಾಗ್ವಾದದಲ್ಲಿ ತೊಡಗಿದ್ದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಉತ್ತರ ಪ್ರದೇಶ ಸರಕಾರವು ಬುಧವಾರ ಅವರನ್ನು ಎತ್ತಂಗಡಿಗೊಳಿಸಿದ್ದು, ಅವರ ಸ್ಥಾನಕ್ಕೆ ಮೊರಾದಾಬಾದ್ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಅರುಣ ಕುಮಾರ್ ಅವರನ್ನು ನೇಮಕಗೊಳಿಸಿದೆ.

ಶಿವನಾಯಕ ಸಿಂಗ್ ಅವರ ಪುತ್ರ ವಿಜಯಕುಮಾರ ಸಿಂಗ್ ಅಲಿಯಾಸ್ ಸೋನು ಸಿಂಗ್ ಅವರನ್ನು ಮಂಗಳವಾರ ಹತ್ಯೆ ಮಾಡಲಾಗಿತ್ತು. ಅವರ ಮರಣೋತ್ತರ ಪರೀಕ್ಷೆಯು ಅಮೇಠಿ ಆಸ್ಪತ್ರೆಯಲ್ಲಿ ನಡೆದಿದ್ದು,ಆಸ್ಪತ್ರೆಯ ಹೊರಗೆ ಉದ್ರಿಕ್ತ ಜನಜಂಗುಳಿ ಜಮಾಯಿಸಿತ್ತು. ಈ ಸಂದರ್ಭ ಸುನಿಲ್ ಸಿಂಗ್ ಜೊತೆ ವಾಗ್ವಾದ ನಡೆಸಿದ್ದ ಶರ್ಮಾ, ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದು ವೀಡಿಯೊದಲ್ಲಿನ ದೃಶ್ಯದಲ್ಲಿದೆ.

ಬುಧವಾರ ಅಮೇಠಿ ಜಿಲ್ಲಾಧಿಕಾರಿಗಳ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟಿಸಿರುವ ಶರ್ಮಾ,ಸುಳ್ಳನ್ನು ಸೃಷ್ಟಿಸಲು ಮತ್ತು ಕುಚೇಷ್ಟೆಗಾಗಿ ವೀಡಿಯೊಗಳನ್ನು ತಿರುಚಬಹುದಾಗಿದೆ. ಎಲ್ಲ ವೀಡಿಯೊಗಳೂ ವಸ್ತುಸ್ಥಿತಿಯನ್ನು ತೋರಿಸುವುದಿಲ್ಲ ಎಂದು ಹೇಳಿದ್ದಾರೆ. ಅವರ ಟ್ವೀಟ್ ಸುನಿಲ್ ಸಿಂಗ್ ಅವರ ವೀಡಿಯೊ ಹೇಳಿಕೆಯನ್ನು ಒಳಗೊಂಡಿದೆ. ‘ಜಿಲ್ಲಾಧಿಕಾರಿಗಳು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಬಿಂಬಿಸಿರುವ ಸುದ್ದಿಯನ್ನು ಟಿವಿ ವಾಹಿನಿಗಳಲ್ಲಿ ನೋಡಿದ್ದೇನೆ. ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ. ಟಿವಿಗಳಲ್ಲಿ ಪ್ರಸಾರಿಸಿರುವ ವೀಡಿಯೋ ತಿರುಚಿದ್ದಾಗಿದೆ. ಜಿಲ್ಲಾಧಿಕಾರಿಗಳು ನಮ್ಮ ಎಲ್ಲ ಸಮಸ್ಯೆಗಳನ್ನು ಆಲಿಸಿದ್ದರು ಮತ್ತು ಸಾಧ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಹಲವಾರು ವರ್ಷಗಳಿಂದ ನಾನು ಅವರ ಜೊತೆ ವೈಯಕ್ತಿಕ ಸಂಬಂಧವನ್ನು ಹೊಂದಿದ್ದೇನೆ ’ ಎಂದು ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News