ಐಐಟಿ-ಮದ್ರಾಸ ವಿದ್ಯಾರ್ಥಿನಿಯ ಆತ್ಮಹತ್ಯೆ: ನ್ಯಾಯೋಚಿತ, ಪಾರದರ್ಶಕ ತನಿಖೆಗೆ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಒತ್ತಾಯ

Update: 2019-11-14 14:19 GMT
ಫೋಟೋ: PTI

ಚೆನ್ನೈ,ನ.13: ಐಐಟಿ-ಮದ್ರಾಸ್‌ನ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯೋಚಿತ,ಪಾರದರ್ಶಕ ಮತ್ತು ಸ್ವತಂತ್ರ ತನಿಖೆಗಾಗಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಗುರುವಾರ ಆಗ್ರಹಿಸಿದ್ದಾರೆ.

ಐಐಟಿ-ಮದ್ರಾಸ್‌ನಲ್ಲಿ ಮಾನವಿಕ ಮತ್ತು ಸಮಾಜ ಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಕೇರಳದ ಕೊಲ್ಲಂ ಮೂಲದ ಫಾತಿಮಾ ಲತೀಫ್ ಅವರ ಶವವು ನ.9ರಂದು ಹಾಸ್ಟೆಲ್ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲವಾದರೂ ವಿದ್ಯಾರ್ಥಿನಿಯ ಮೊಬೈಲ್ ಫೋನ್‌ನಲ್ಲಿಯ ಟಿಪ್ಪಣಿಯೊಂದು ಕೆಲ ಬೋಧಕರನ್ನು ದೂರಿತ್ತು.

ವಿದ್ಯಾರ್ಥಿನಿಯ ಸಾವಿನ ಕುರಿತು ಕಾಲಮಿತಿಯಲ್ಲಿ ತನಿಖೆಯನ್ನು ನಡೆಸಬೇಕು ಎಂದು ಹೇಳಿದ ಸ್ಟಾಲಿನ್,ಶಿಕ್ಷಣದ ಕೇಸರಿಕರಣವನ್ನು ತಪ್ಪಿಸಬೇಕು ಎಂದು ಪ್ರತಿಪಾದಿಸಿದರು. ರಾಷ್ಟ್ರಧ್ವಜದ ತ್ರಿವರ್ಣಗಳಂತೆ ಎಲ್ಲರನ್ನು ಸಮಾನವಾಗಿ ನಡೆಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಲತೀಫಾಳ ಸಾವಿನ ಕುರಿತು ಸಿಐಡಿ ತನಿಖೆ ನಡೆಯಬೇಕು ಎಂದು ಬುಧವಾರ ಇಲ್ಲಿ ಆಗ್ರಹಿಸಿದ್ದ ಎಂಎಂಕೆ ನಾಯಕ ಎಂ.ಎಚ್.ಜವಾಹಿರುಲ್ಲಾ ಅವರು,ತಾನು ಮೃತ ವಿದ್ಯಾರ್ಥಿನಿಯ ತಂದೆ ಅಬ್ದುಲ್ ಲತೀಫ್ ಅವರೊಂದಿಗೆ ಮಾತನಾಡಿದ್ದು,ಬೋಧಕರೋರ್ವರ ಧಾರ್ಮಿಕ ತಾರತಮ್ಯ ತನ್ನ ಪುತ್ರಿಯ ಆತ್ಮಹತ್ಯೆಗೆ ಕಾರಣವೆಂದು ಆರೋಪಿಸಿದ್ದಾರೆ ಎಂದು ತಿಳಿಸಿದ್ದರು.

ಸದ್ರಿ ಬೋಧಕ ಒಮ್ಮೆ ಪರೀಕ್ಷೆಯಲ್ಲಿ ತನ್ನ ಪುತ್ರಿಗೆ ಮೂರು ಅಂಕಗಳನ್ನು ಕಡಿಮೆ ನೀಡಿದ್ದರು. ವಿಭಾಗದ ಮುಖ್ಯಸ್ಥರ ಗಮನಕ್ಕೆ ತಂದಬಳಿಕ ಇದನ್ನು ಸರಿಪಡಿಸಲಾಗಿತ್ತು. ಪುತ್ರಿಯ ಸಾವಿನ ಕುರಿತು ತನಿಖೆಯಲ್ಲಿ ಹಸ್ತಕ್ಷೇಪಕ್ಕೆ ಆಗ್ರಹಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತಾನು ಅಹವಾಲು ಸಲ್ಲಿಸಿದ್ದೇನೆ ಎಂದು ಲತೀಫ್ ಹೇಳಿದ್ದಾರೆ.

ತನ್ಮಧ್ಯೆ,ಗುರುವಾರ ಪ್ರಕರಣವನ್ನು ಸೆಂಟ್ರಲ್ ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದ್ದು,ತನಿಖೆಗೆ ಎಸಿಪಿ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗುವುದು ಎಂದು ಚೆನ್ನೈ ಪೊಲೀಸ್ ಆಯುಕ್ತ ಎ.ಕೆ.ವಿಶ್ವನಾಥನ್ ತಿಳಿಸಿದ್ದಾರೆ.

ಲತೀಫಾ ಅವರ ಆತ್ಮಹತ್ಯೆಯು ಕಳೆದೊಂದು ವರ್ಷದಲ್ಲಿ ಐಐಟಿ-ಮದ್ರಾಸ್‌ನಲ್ಲಿ ನಡೆದಿರುವ ಇಂತಹ ಐದನೇ ಘಟನೆಯಾಗಿದೆ. ಗುರುವಾರ ಕಾಂಗ್ರೆಸ್ ಯುವ ಘಟಕವು ಐಐಟಿ-ಮದ್ರಾಸ್‌ನ ಹೊರಗೆ ಪ್ರತಿಭಟನೆ ನಡೆಸಿ ಮೃತ ವಿದ್ಯಾರ್ಥಿನಿಗೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಬುಧವಾರ ಸಂಜೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೂಡ ಪ್ರತಿಭಟನೆಯನ್ನು ನಡೆಸಿತ್ತು.

ಪೊಲೀಸ್ ತನಿಖೆಗೆ ತಾವು ಸಹಕರಿಸುತ್ತಿರುವುದಾಗಿ ಐಐಟಿ-ಮದ್ರಾಸ್‌ನ ಮಾನವಿಕ ಮತ್ತು ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಉಮಾಕಾಂತ ದಾಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News