ಬೆಂಗಳೂರು ಬಿಟ್ಟು ಹೊರಬರುವ ಉದ್ಯಮಿಗಳಿಗೆ ಹೆಚ್ಚಿನ ನೆರವು: ಸಚಿವ ಜಗದೀಶ್ ಶೆಟ್ಟರ್

Update: 2019-11-14 15:46 GMT

ಬೆಂಗಳೂರು, ನ.14: ರಾಜಧಾನಿ ಬೆಂಗಳೂರು ಬಿಟ್ಟು ಹೊರ ಬರುವ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ರಾಜ್ಯ ಸರಕಾರ ಹೆಚ್ಚಿನ ನೆರವು ನೀಡಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಗುರುವಾರ ನಗರದ ಹೆಬ್ಬಾಳ ಮುಖ್ಯ ರಸ್ತೆಯ ಖಾಸಗಿ ಹೊಟೇಲ್ ನಲ್ಲಿ ಕ್ರೆಡೈ ಕರ್ನಾಟಕ ಸಂಸ್ಥೆ ಆಯೋಜಿಸಿದ್ದ, ಸ್ಟೇಟ್ ಕಾನ್ ಹೌಸಿಂಗ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬೆಂಗಳೂರು ಮಾತ್ರ ಆಯ್ಕೆಯಾಗಬಾರದು. ಉತ್ತರ ಮತ್ತು ಹೈದರಾಬಾದ್ ಕರ್ನಾಟಕ ಸೇರಿದಂತೆ ಇತರೆ ನಗರಗಳಲ್ಲಿ ಬಂಡವಾಳ ಹೂಡಿಕೆ ಮಾಡಬೇಕು. ಇಂತಹ, ಉದ್ಯಮಿಗಳಿಗೆ ಸರಕಾರ ಅಗತ್ಯ ನೆರವು ಕಲ್ಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಯಮ ಪಾಲಿಸಿ: ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು ತನ್ನ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದರ ವಿರುದ್ಧ, ಉದ್ಯಮಿಗಳೇ ಎಚ್ಚರವಹಿಸಬೇಕು. ಜೊತೆಗೆ, ವಿವಿಧ ಇಲಾಖೆಗಳ ಕಾನೂನು ನಿಯಮ ಪಾಲನೆಗೆ ಮುಂದಾಗಬೇಕು. ಎರಡು ದಶಕಗಳಿಗೊಮ್ಮೆ ನಕ್ಷೆ ಬದಲಾವಣೆ ಆಗಬೇಕು. ಯೋಜನೆ ಪ್ರಾಧಿಕಾರ ನಿಯಮ ಸರಳೀಕರಣವಾಗಬೇಕು ಎನ್ನುವ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿದೆ ಎಂದು ಹೇಳಿದರು.

ಕ್ರೆಡೈ ಸಂಸ್ಥೆ ಬೆಂಗಳೂರು ಅಧ್ಯಕ್ಷ ಕಿಶೋರ್ ಜೈನ್ ಮಾತನಾಡಿ, ಬೃಹತ್ ಕಟ್ಟಡ ಸಂಕೀರ್ಣ ನಿರ್ಮಾಣ ಸಂದರ್ಭದಲ್ಲಿ ಬಿಬಿಎಂಪಿ ಮತ್ತು ನಗರಪಾಲಿಕೆಯ ಹಳೆಯ ನಿಯಮಗಳಿಂದ ತೊಂದರೆ ಉಂಟಾಗುತ್ತಿದೆ ಇದನ್ನು ಸರಕಾರ ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಕ್ರೆಡೈ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷ ಎಂ.ಸತೀಶ್, ನಿಕಟಪೂರ್ವ ಅಧ್ಯಕ್ಷ ಇರ್ಫಾನ್ ರಝಾಕ್, ರಾಜ್ಯಾಧ್ಯಕ್ಷ ಅಸ್ಟೀನ್ ರೋಚ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News