ಶಾಲೆಗಳ ಬಳಿ ಜಂಕ್ ಫುಡ್ ಮಾರಾಟ ನಿಷೇಧಕ್ಕೆ ಅಧಿಸೂಚನೆ ಪ್ರಕಟ

Update: 2019-11-14 16:03 GMT

ಬೆಂಗಳೂರು, ನ.14: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯೋಗವು ಶಾಲೆಗಳ ಆವರಣದಲ್ಲಿ ಕ್ಯಾಂಟೀನ್, ಕೆಫೆಟೇರಿಯಾ, ಅಂಗಡಿಗಳಲ್ಲಿ ಕಾರ್ಬೋನೇಟೆಡ್ ತಂಪು ಪಾನೀಯಗಳು, ಚಿಪ್ಸ್, ಸಂಸ್ಕರಿತ ಹಣ್ಣಿನ ರಸದ ಪೊಟ್ಟಣ, ಪಿಜ್ಜಾ, ಸಮೋಸ ಹಾಗೂ ಇನ್ನಿತರೆ ಜಂಕ್‌ಫುಡ್‌ಗಳ ಮಾರಾಟ ನಿಷೇಧ ಕುರಿತು ಅ.30ರಂದು ಕರಡು ಅಧಿಸೂಚನೆ ಪ್ರಕಟಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಜಂಕ್ ಫುಡ್ ನಿಷೇಧ ಸೇರಿದಂತೆ ಮಧ್ಯಾಹ್ನದ ಬಿಸಿ ಊಟ ಸಿದ್ಧಪಡಿಸುವಾಗ ಶುಚಿತ್ವ ಕಾಪಾಡಿಕೊಳ್ಳುವುದು, ಶಾಲೆಗಳ ಕ್ಯಾಂಟೀನ್‌ಗಳು, ಮೆಸ್, ಹಾಸ್ಟೆಲ್‌ಗಳು ಹಾಗೂ ಶಾಲೆಯಿಂದ 50 ಮೀಟರ್ ಅಂತರದಲ್ಲಿ ಹೆಚ್ಚು ಕೊಬ್ಬಿನ ಅಂಶ ಇರುವ ತಿನಿಸುಗಳ ಮಾರಾಟ ನಿಷೇಧ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಅವರು ಸೂಚನೆ ನೀಡಿದ್ದಾರೆ.

ಶಾಲೆಗಳಲ್ಲಿ ಸುರಕ್ಷಿತ ಆಹಾರ ಪದ್ಧತಿಗೆ ಉತ್ತೇಜನ ಮತ್ತು ತಿಳಿವಳಿಕೆ, ರಾಷ್ಟ್ರೀಯ ಪೌಷ್ಠಿಕಾಂಶ ಸಂಸ್ಥೆ ಹೇಳಿರುವ ರೀತಿಯಲ್ಲಿ ಆಹಾರ ವಸ್ತುಗಳ ಬಳಕೆಗೆ ಉತ್ತೇಜನ ನೀಡುವ ಕುರಿತಂತೆ 10 ಅಂಶಗಳನ್ನು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಶಾಲೆಗಳ ಬಳಿಯಲ್ಲಿ ಜಂಕ್‌ಫುಡ್ ನಿಷೇಧಿಸುವ ಕುರಿತು ಈ ಅಧಿಸೂಚನೆಯಲ್ಲಿ ನೀಡಲಾದ ಸೂಚನೆಗಳನ್ನು ನಮ್ಮ ರಾಜ್ಯದಲ್ಲಿ ಯಥವತ್ತಾಗಿ ಜಾರಿಗೊಳಿಸಲು ತಕ್ಷಣವೇ ನಿಯಮಗಳನ್ನು ರೂಪಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸುರೇಶ್ ಕುಮಾರ್ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News