ಕಾಶ್ಮೀರದ ಭಯೋತ್ಪಾದಕರು ಪಾಕಿಸ್ತಾನದ ಹೀರೊಗಳು ಎಂದ ಮುಶರ್ರಫ್

Update: 2019-11-14 16:18 GMT
ಫೋಟೋ: ndtv.com

ಇಸ್ಲಾಮಾಬಾದ್, ನ. 14: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ವಿರುದ್ಧ ಹೋರಾಡಲು, ಕಾಶ್ಮೀರಿಗಳಿಗೆ ಪಾಕಿಸ್ತಾನದಲ್ಲಿ ಮುಜಾಹಿದೀನ್‌ಗಳಾಗಲು ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಶರ್ರಫ್ ಒಪ್ಪಿಕೊಂಡಿದ್ದಾರೆ.

ಭಯೋತ್ಪಾದಕರನ್ನು ಪಾಕಿಸ್ತಾನದ ‘ಹೀರೋ’ಗಳು ಎಂಬುದಾಗಿಯೂ ಅವರು ಬಣ್ಣಿಸಿದ್ದಾರೆ. ಉಸಾಮ ಬಿನ್ ಲಾದನ್, ಅಯ್‌ಮಾನ್ ಅಲ್-ಜವಾಹಿರಿ, ಜಲಾಲುದ್ದೀನ್ ಹಕ್ಕಾನಿ ಮತ್ತು ಇತರರು ‘ಪಾಕಿಸ್ತಾನದ ಹೀರೋಗಳು’ ಎಂಬುದಾಗಿಯೂ ಅವರು ಹೇಳಿದ್ದಾರೆ.

 ಮುಶರ್ರಫ್ ಸಂದರ್ಶನದ ತುಣುಕನ್ನು ಪಾಕಿಸ್ತಾನದ ರಾಜಕಾರಣಿ ಫರ್ಹತುಲ್ಲಾ ಬಾಬರ್ ಬುಧವಾರ ಟ್ವಿಟರ್‌ನಲ್ಲಿ ಬಿಡುಗಡೆಗೊಳಿಸಿದರು. ಆದರೆ, ಈ ಸಂದರ್ಶನವನ್ನು ಮುಶರ್ರಫ್ ಯಾವಾಗ ನೀಡಿದ್ದಾರೆ ಎನ್ನುವುದು ಗೊತ್ತಾಗಿಲ್ಲ.

‘‘ಪಾಕಿಸ್ತಾನಕ್ಕೆ ಬಂದ ಕಾಶ್ಮೀರಿಗಳು ಭವ್ಯ ಸ್ವಾಗತವನ್ನು ಪಡೆದಿದ್ದಾರೆ. ನಾವು ಅವರಿಗೆ ತರಬೇತಿ ಮತ್ತು ಬೆಂಬಲ ನೀಡಿದ್ದೇವೆ. ನಾವು ಅವರನ್ನು ಭಾರತೀಯ ಸೇನೆಯ ವಿರುದ್ಧ ಹೋರಾಡುವ ಮುಜಾಹಿದೀನ್‌ಗಳಂತೆ ಪರಿಗಣಿಸಿದ್ದೇವೆ. ಬಳಿಕ, ಈ ಅವಧಿಯಲ್ಲಿ ಲಷ್ಕರೆ ತಯ್ಯಬ ಮುಂತಾದ ವಿವಿಧ ಭಯೋತ್ಪಾದಕ ಸಂಘಟನೆಗಳು ಹುಟ್ಟಿಕೊಂಡವು. ಅವರು (ಭಯೋತ್ಪಾದಕರು) ನಮ್ಮ ಹೀರೋಗಳು’’ ಎಂದು ಈ ವೀಡಿಯೊದಲ್ಲಿ ಮುಶರ್ರಫ್ ಹೇಳುವುದು ಕೇಳುತ್ತದೆ.

ಉಸಾಮ ಬಿನ್ ಲಾದನ್ ಮತ್ತು ಜಲಾಲುದ್ದೀನ್ ಹಕ್ಕಾನಿ ಮುಂತಾದ ಭಯೋತ್ಪಾದಕರು ‘ಪಾಕಿಸ್ತಾನದ ಹೀರೋಗಳು’ ಎಂಬುದಾಗಿಯೂ ಜನರಲ್ (ನಿವೃತ್ತ) ಮುಶರ್ರಫ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News