ನವೆಂಬರ್ 16ರಂದು ಶಬರಿಮಲೆ ಭೇಟಿ: ತೃಪ್ತಿ ದೇಸಾಯಿ

Update: 2019-11-14 18:05 GMT
PTI

ಕೊಚ್ಚಿ, ನ. 14: ಶಬರಿಮಲೆ ದೇವಾಲಯಕ್ಕೆ ನವೆಂಬರ್ 16ರಂದು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದೇನೆ ಎಂದು ಮಹಿಳಾ ಹಕ್ಕು ಹೋರಾಟಗಾರ್ತಿ ತೃಪ್ತಿ ದೇಸಾಯಿ ಗುರುವಾರ ಹೇಳಿದ್ದಾರೆ.

ತನ್ನ ಶಬರಿಮಲೆ ಯಾತ್ರೆಯನ್ನು ಘೋಷಿಸಿರುವ ತೃಪ್ತಿ ದೇಸಾಯಿ ವಿಸ್ತೃತ ಪೀಠ ಸೆಪ್ಟಂಬರ್ 28ರ ತನ್ನ ತೀರ್ಪನ್ನು ಬದಲಾಯಿಸದು ಎಂಬ ಭರವಸೆ ಇದೆ ಎಂದಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಆದೇಶ ಬರುವವರೆಗೆ ಮಹಿಳೆಯರಿಗೆ ಶಬರಿಮಲೆ ಪ್ರವೇಶ ತೆರೆದಿದೆ ಎಂಬುದು ನನಗೆ ಅರಿವಿದೆ. ಯಾರೂ ಪ್ರತಿಭಟಿಸಬಾರದು. ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದರು.

  ಸುಪ್ರೀಂ ಕೋರ್ಟ್ ಕೇರಳದ ಜನಪ್ರಿಯ ಅಯ್ಯಪ್ಪ ದೇಗುಲದ ಪ್ರವೇಶಕ್ಕೆ 10ರಿಂದ 50 ಪ್ರಾಯ ಗುಂಪಿನ ಬಾಲಕಿಯರು ಹಾಗೂ ಮಹಿಳೆಯರ ಪ್ರವೇಶ ನಿರ್ಬಂಧ ರದ್ದುಗೊಳಿಸಿದ ಹಾಗೂ ಶತಮಾನಗಳ ಹಿಂದೂ ಧಾರ್ಮಿಕ ಆಚರಣೆ ಕಾನೂನು ಬಾಹಿರ, ಸಂವಿಧಾನಬಾಹಿರ ಎಂದು ಹೇಳಿದ ವಾರಗಳ ಬಳಿಕ ಕಳೆದ ವರ್ಷ ನವೆಂಬರ್‌ನಲ್ಲಿ ಶಬರಿಮಲೆ ದೇವಾಲಯ ಪ್ರವೇಶಿಸಲು ದೇಸಾಯಿ ಅವರು ವಿಫಲ ಪ್ರಯತ್ನ ನಡೆಸಿದ್ದರು.

 ಶಬರಿಮಲೆ ಪ್ರಕರಣದ ಕುರಿತು 2018ರ ತನ್ನ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಿದ ಮನವಿಗಳ ಗುಚ್ಚವನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರ ಪ್ರವೇಶ ನಿರಾಕರಣೆ ಕೇವಲ ಶಬರಿಮಲೆಗೆ ಮಾತ್ರ ಸೀಮಿತವಾಗಿಲ್ಲ. ಇತರ ಧರ್ಮಗಳಲ್ಲಿ ಕೂಡ ಪ್ರಚಲಿತದಲ್ಲಿ ಇದೆ ಎಂದು ಹೇಳಿದೆ. ಅಲ್ಲದೆ, ಎಲ್ಲ ಮರು ಪರಿಶೀಲನಾ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.

ಮರು ಪರಿಶೀಲನಾ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ಕಾರಣವೇನು ಎಂದು ಮಹಿಳಾ ಹಕ್ಕು ಹೋರಾಟಗಾರ್ತಿ ಕವಿತಾ ಕೃಷ್ಣನ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News