ಶಿಕ್ಷಣ ಇಲಾಖೆ ಸುತ್ತೋಲೆ ಹಿಂದೆ ಆರೆಸ್ಸೆಸ್, ಸಂಘಪರಿವಾದ ಕೈವಾಡ: ಅರ್.ಧ್ರುವನಾರಾಯಣ್ ಆರೋಪ

Update: 2019-11-14 18:35 GMT

ಮೈಸೂರು,ನ.14: ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂಬ ಶಿಕ್ಷಣ ಇಲಾಖೆ ಸುತ್ತೋಲೆ ಹಿಂದೆ ಸಂಘಪರಿವಾರದ ಕೈವಾಡವಿದ್ದು ಈ ಘಟನೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆ ತಿಳಿಯಲು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನ.26 ರಂದು ಸಂವಿಧಾನ ದಿನಾಚರಣೆ ಆಚರಿಸುವ ಸಲುವಾಗಿ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಅಂಬೇಡ್ಕರ್ ಅವರನ್ನು ಕಡೆಗಣಿಸುವ ಯತ್ನ ನಡೆದಿದೆ. ಶಿಕ್ಷಣ ಇಲಾಖೆಯನ್ನು ಕೇಸರಿಕರಣ ಮಾಡಬೇಕು ಎಂಬ ಹುನ್ನಾರ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕ ಅಜೆಂಡಾ ಆಗಿದೆ. ಹಾಗಾಗಿ ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂಬ ಕೈಪಿಡಿಯನ್ನು ಹೊರ ತರುವ ಮೂಲಕ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ ಎಂದು ದೂರಿದರು.

ಘಟನೆಗೆ ಸಂಭದಿಸಿದಂತೆ ಶಿಕ್ಷಣ ಸಚಿವ ಸುರೇಶ್‍ ಕುಮಾರ್ ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು ರಾಜೀನಾಮೆ ಕೊಡಬೇಕು. ಜೊತೆಗೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅಥವಾ ನಿವೃತ್ತ ಹೈಕೋರ್ಟ್ ನ್ಯಾಯಧೀಶರಿಂದ ತನಿಖೆ ಮಾಡಿಸಿ ಈ ಘಟನೆಗೆ ಕಾರಣಕರ್ತರು ಯಾರು ಎಂಬ ಸತ್ಯಾಂಶವನ್ನು ಬಯಲಿಗೆಳೆಯಬೇಕಿದೆ ಎಂದು ಹೇಳಿದರು.

ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳಲ್ಲೂ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಬಗ್ಗೆ ತಪ್ಪು ಅಭಿಪ್ರಾಯ ಕಲ್ಪಿಸಲಾಗುತ್ತಿದೆ.  ಅದೇ ರೀತಿ ಕರ್ನಾಟದಲ್ಲೂ ಮಾಡುವ ಪ್ರಯತ್ನ ನಡೆದಿದೆ. ಆರೆಸ್ಸೆಸ್ ಮತ್ತು ಸಂಘಪರಿವಾರ ಶಿಕ್ಷಣ ಇಲಾಖೆಯನ್ನು ಕೇಸರಿಕರಣಗೊಳಿಸಲು ನಿರಂತರ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರಡು ಸಮಿತಿ ಅಧ್ಯಕ್ಷರಾಗಿ ಅಂಬೇಡ್ಕರ್ ಅವರೇ ಸಂವಿಧಾನ ರಚನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಆ ಸಮಿತಿ ಸದಸ್ಯರಾಗಿದ್ದ ಟಿ.ಎಂ.ಕೃಷ್ಣಮಚಾರ್ ಅವರೇ ರಾಜ್ಯ ಸಭೆಯಲ್ಲಿ ಅಂಬೇಡ್ಕರ್ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಪಾತ್ರ ಬಹಳ ಮುಖ್ಯವಾಗಿದ್ದು ಇದರ ಸಂಪೂರ್ಣ ಕ್ರೆಡಿಟ್ ಅಂಬೇಡ್ಕರ್ ಅವರಿಗೆ ಸಿಗಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬ ಸದಸ್ಯರಾದ ಕೃಷ್ಣ ಚಂದ್ರ ಶರ್ಮ ಅವರು ಎಲ್ಲಾ ಸದಸ್ಯರು ಸಂವಿಧಾನ ರಚನೆಯಲ್ಲಿ ಕೈ ಕೊಟ್ಟರೂ ಅಂಬೇಡ್ಕರ್ ಅವರೊಬ್ಬರೇ ಬಹಳ ಉತ್ಸಾಹದಿಂದ ಎಲ್ಲಾ ವರ್ಗಗಳನ್ನು ಅಧ್ಯಯನ ಮಾಡಿ ವಿಶ್ವವೇ ಮೆಚ್ಚುವಂತೆ ಸಂವಿಧಾನ ನೀಡಿದ್ದಾರೆ ಎಂದು ಹೇಳಿದ್ದಾರೆ. ದೇಶದ ಮೊದಲ ರಾಷ್ಟ್ರಪತಿಗಳಾಗಿದ್ದ ರಾಜೇಂದ್ರ ಪ್ರಸಾದ್ ಅವರು ಸಹ ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆದರೆ ಸಂಘಪರಿವಾರ ಮತ್ತು ಬಿಜೆಪಿಯವರಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತ ಮತ್ತು ಅಮೇರಿಕ ಜಂಟಿ ಅಧಿವೇಶನದಲ್ಲಿ ಅಮೆರಿಕಾದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರೇ ಭಾರತ ದೇಶದ ಇಬ್ಬರು ಮಹಾನ್ ವ್ಯಕ್ತಿಗಳಾದ ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ವಿಶ್ವಮಾನವರು ಎಂದು ಹೇಳಿದ್ದಾರೆ. ಇನ್ನೂ ವಿಶೇಷವಾಗಿ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಕುರಿತು ಇಡೀ ವಿಶ್ವಕ್ಕೆ ಮಾದರಿ ಎಂದು ಹೊಗಳಿದ್ದಾರೆ. ಅಂತಹದರಲ್ಲಿ ನಮ್ಮ ದೇಶದ ಕೇಸರಿ ಜನರಿಗೆ ಅದು ಇಷ್ಟವಾಗುತ್ತಿಲ್ಲ ಎಂದು ಜರಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕ ಎಸ್.ಬಾಲರಾಜ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News