ಆಹಾರ ಆರ್ಡರ್ ರದ್ದು ಮಾಡಲು ಟೋಲ್‍ಫ್ರೀ ಸಂಖ್ಯೆಗೆ ಕರೆ ಮಾಡಿ 4 ಲಕ್ಷ ಕಳೆದುಕೊಂಡ ಗ್ರಾಹಕ!

Update: 2019-11-15 05:19 GMT

ಲಕ್ನೋ: ಆಹಾರ ಆರ್ಡರ್ ರದ್ದು ಮಾಡಲು ಟೋಲ್‍ಫ್ರೀ ಸಂಖ್ಯೆಗೆ ಕರೆ ಮಾಡಿ ನಾಲ್ಕು ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ ವರದಿಯಾಗಿದೆ.

ಗೋಮತಿನಗರದ ವಿರಾಟ್ ಖಂಡ್ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಆನ್‍ಲೈನ್ ಆಹಾರ ಸರಬರಾಜು ಆ್ಯಪ್‍ನಲ್ಲಿ ಆರ್ಡರ್ ಮಾಡಲಾಗಿತ್ತು. ಆದರೆ ಗುಣಮಟ್ಟ ತೃಪ್ತಿಕರವಾಗಿಲ್ಲದ ಹಿನ್ನೆಲೆಯಲ್ಲಿ ಗ್ರಾಹಕ ಕಾಳಜಿ ಸಂಖ್ಯೆಗೆ ಕರೆ ಮಾಡಲು ನಿರ್ಧರಿಸಿದರು.

ವಂಚನೆಗೊಳಗಾದ ವ್ಯಕ್ತಿಯ ಹೆಸರನ್ನು ಅಮನ್ ಎಂದು ಬದಲಿಸಲಾಗಿದೆ. ಇಂಟರ್ ನೆಟ್‍ನಲ್ಲಿ ಗ್ರಾಹಕ ಕಾಳಜಿ ಸಂಖ್ಯೆಯನ್ನು ಹುಡುಕಿ ಕರೆ ಮಾಡಿದರು. ಆದರೆ ಕಂಪನಿಯ ಟೋಲ್‍ಫ್ರೀ ಸಂಖ್ಯೆ ನಕಲಿ ಎಂದು ದೂರಲಾಗಿದೆ. ಕರೆ ಸ್ವೀಕರಿಸಿದ ವ್ಯಕ್ತಿ ಗ್ರಾಹಕ ಸೇವಾ ವಿಭಾಗದ ಅಧಿಕಾರಿ ಎಂದು ಪರಿಚಯಿಸಿಕೊಂಡ. ಒಂದು ಮೊಬೈಲ್ ಅಪ್ಲಿಕೇಶನ್ ಅಳವಡಿಸಿಕೊಂಡು ಉಳಿತಾಯ ಖಾತೆಗೆ ಲಾಗಿನ್ ಮಾಡುವಂತೆ ಸೂಚಿಸಿದ. ಆ ಸಲಹೆಯಂತೆ ಅಮನ್, ಆ್ಯಪ್‍ನಲ್ಲಿ ಬ್ಯಾಂಕ್ ಖಾತೆ ವಿವರ ನಮೂದಿಸಿದರು. ಇದಾದ ತಕ್ಷಣ ಅಮನ್ ಮೊಬೈಲ್‍ಗೆ ಒಟಿಪಿ ಬಂತು; ಆ ಓಟಿಪಿ ನಮೂದಿಸಿದ ತಕ್ಷಣ ಖಾತೆಗೆ ಹಣ ಮರುಪಾವತಿಯಾಗುತ್ತದೆ ಎಂದು ವ್ಯಕ್ತಿ ಹೇಳಿದ. ಹೀಗೆ ಮಾಡಿದ ಕೆಲವೇ ಕ್ಷಣದಲ್ಲಿ ಖಾತೆಯಿಂದ ನಾಲ್ಕು ಲಕ್ಷ ರೂಪಾಯಿ ಪಡೆಯಲಾಗಿದೆ ಎಂದು ಅಮನ್ ದೂರಿದ್ದಾರೆ.

ಆ್ಯಪ್ ಡೌನ್‍ಲೋಡ್ ಮಾಡಿಕೊಂಡ ತಕ್ಷಣ ಮೊಬೈಲ್ ಫೋನನ್ನು ದೂರಸಂವೇದಿ ವ್ಯವಸ್ಥೆ ಮೂಲಕ ನಿಯಂತ್ರಣಕ್ಕೆ ಪಡೆದು ಹಣ ಪಡೆದಿರಬೇಕು ಎಂದು ಪೊಲೀಸರು ಹೇಳಿದ್ದಾರೆ. ಸೈಬರ್ ವಿಭಾಗದ ನೆರವು ಪಡೆದು ವಂಚಕರನ್ನು ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News