ಮಹಾರಾಷ್ಟ್ರ: ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಂತಿಮ ರೂಪ, ನಾಳೆ ರಾಜ್ಯಪಾಲರ ಭೇಟಿ

Update: 2019-11-15 07:43 GMT

ಮುಂಬೈ, ನ.15: ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಅಂತಿಮ ರೂಪ ಪಡೆದಿದ್ದು, ಮೂರು ಪಕ್ಷಗಳ ಮೈತ್ರಿಕೂಟ ಸರಕಾರಕ್ಕೆ ಶಿವಸೇನೆ ನೇತೃತ್ವವಹಿಸುವುದು ಸ್ಪಷ್ಟವಾಗಿದೆ.

 "ಮುಖ್ಯಮಂತ್ರಿ ಹುದ್ದೆಗಾಗಿ ಶಿವಸೇನೆ ಹಾಗೂ ಬಿಜೆಪಿಯ ಭಿನ್ನಾಭಿಪ್ರಾಯ ಇಲ್ಲಿಗೆ ಕೊನೆಗೊಂಡಿದೆ. ನಾವು ಸಿಎಂ ಹುದ್ದೆಗೆ ಸ್ಪರ್ಧಿಸುತ್ತಿಲ್ಲ. ಶಿವಸೇನೆ ಪಕ್ಷದವರೇ ಮುಖ್ಯಮಂತ್ರಿಯಾಗಲಿದ್ದಾರೆ. ನಿರುದ್ಯೋಗ, ರೈತರ ಸಮಸ್ಯೆ ನಮ್ಮ ಸಾಮಾನ್ಯ ಕಾರ್ಯಕ್ರಮದ ಪ್ರಮುಖ ಕಾರ್ಯಸೂಚಿಯಾಗಿದೆ. ಇನ್ನು 20 ದಿನಗಳಲ್ಲಿ ಹೊಸ ಸರಕಾರ ರಚನೆಯಾಗಲಿದೆ'' ಎಂದು ಎನ್‌ಸಿಪಿ ಮುಖಂಡ ನವಾಬ್ ಮಲಿಕ್ ಶುಕ್ರವಾರ ತಿಳಿಸಿದ್ದಾರೆ.

ಹೊಸ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಸಿಪಿ ವರಿಷ್ಠ ಶರದ್ ಪವಾರ್,‘‘ಯಾರಾದರೂ ಸಿಎಂ ಹುದ್ದೆಗೆ ಬೇಡಿಕೆ ಇಟ್ಟರೆ, ಆ ನಿಟ್ಟಿನಲ್ಲಿ ನಾವು ಯೋಚಿಸುತ್ತೇವೆ’’ ಎಂದರು.

ಮೂರು ಪಕ್ಷಗಳು ಶನಿವಾರ ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ಭೇಟಿಯಾಗಿ ಸರಕಾರ ರಚನೆಯ ಹಕ್ಕು ಮಂಡಿಸುವ ಸಾಧ್ಯತೆಯಿದೆ. ಈ ಮೂಲಕ ಸರಕಾರ ರಚನೆಯ ಬಿಕ್ಕಟ್ಟು ಅಂತ್ಯವಾಗುವ ಲಕ್ಷಣವಿದೆ. ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಅ.24ರಂದು ಹೊರಬಂದಿತ್ತು.

ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಪದವಿಗೇರುತ್ತಾರೋ, ಅಥವಾ ಪಕ್ಷವು ಬೇರೆ ಅಭ್ಯರ್ಥಿಯನ್ನು ಸಿಎಂ ಸ್ಥಾನದಲ್ಲಿ ಆಯ್ಕೆ ಮಾಡುತ್ತದೋ ಎಂದು ಶಿವಸೇನೆ ಇನ್ನೂ ಸ್ಪಷ್ಟಪಡಿಸಿಲ್ಲ. ಒಂದು ವೇಳೆ ಉದ್ದವ್ ಠಾಕ್ರೆ ಸರಕಾರದಿಂದ ದೂರ ಉಳಿಯಲು ಬಯಸಿದರೆ ಬೇರೊಬ್ಬ ಸ್ಪರ್ಧಿಯನ್ನು ಸಿಎಂ ಹುದ್ದೆಗೆ ಪರಿಗಣಿಸಲಾಗುತ್ತದೆ ಎಂದು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಏಕನಾಥ ಶಿಂಧೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News