ಅಂಬೇಡ್ಕರ್ ಗೆ ಅಪಮಾನ ಆರೋಪ: ಶಿಕ್ಷಣ ಸಚಿವ, ಪ್ರಧಾನ ಕಾರ್ಯದರ್ಶಿ ರಾಜೀನಾಮೆಗೆ ದಸಂಸ ಒತ್ತಾಯ

Update: 2019-11-15 17:18 GMT

ಮೈಸೂರು,ನ.15: ಸಂವಿಧಾನವನ್ನು ರಚಿಸಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರು ಒಬ್ಬರೇ ಅಲ್ಲ ಎಂದು ಸುತ್ತೋಲೆ ಹೊರಡಿಸುವ ಮೂಲಕ ಅವರನ್ನು ಅವಮಾನಿಸಿದ ಶಿಕ್ಷಣ ಇಲಾಖೆಯ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಪುರಭವನದ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಭಾರತದ ಅಖಂಡತೆ, ಸಹೋದರತೆ, ಸಮಗ್ರತೆ ಇರುವ ಭಾರತದ ಸಂವಿಧಾನದ ಕುರಿತು ಇತ್ತೀಚಿನ ದಿನಗಳಲ್ಲಿ ಇಲ್ಲ ಸಲ್ಲದ ಹೇಳಿಕೆಗಳು ಕೇಳಿ ಬರುತ್ತಿದ್ದು, ಡಾ.ಅಂಬೇಡ್ಕರ್ ಅವರನ್ನು ಅವಮಾನಿಸುವ ಹುನ್ನಾರ ನಡೆಯುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ನ.26 ಸಂವಿಧಾನ ದಿನವೆಂದು ಘೋಷಿಸಿದ್ದು, ಅದರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಓರ್ವರೇ ಸಂವಿಧಾನ ಬರೆದಿಲ್ಲ ಎಂಬುದನ್ನು ಸೇರಿಸಿ ಸಮಗ್ರ ಭಾರತೀಯರಿಗೆ ತಪ್ಪು ಸಂದೇಶ ರವಾನಿಸಲಾಗಿದೆ. ಇದು ಮನುವಾದಿಗಳ ಕೊಳಕು ಮನಸ್ಥಿತಿಯನ್ನು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.

ಜ.26ರಂದೇ ಸಂವಿಧಾನ ದಿನಾಚರಣೆಯನ್ನು ಆಚರಿಸಬೇಕು. ಸಂವಿಧಾನ ಸಭೆಯ ಚರ್ಚೆಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮ್ಯೂಸಿಯಂ ರೀತಿ ಮಾಡಿ ಸಂರಕ್ಷಿಸಬೇಕು. ಸಂವಿಧಾನವನ್ನು ಒಪ್ಪದಿದ್ದವರು ದೇಶವನ್ನು ಬಿಟ್ಟು ಹೋಗಬೇಕು. ಕೇಂದ್ರ ಸರ್ಕಾರ ಒಂದು ದೇಶ, ಒಂದು ಸಂವಿಧಾನವೆಂದು ಹೇಳುತ್ತಿದೆ. ಆದರೆ ಅಸಮಾನತೆ, ಅಸ್ಪೃಶ್ಯತೆ ಹಾಗೆಯೇ ಇದೆ. ಆದ್ದರಿಂದ ಕಠಿಣ ಕಾನೂನುಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹದೇವು, ಶಂಕರ್, ನಾಗರಾಜು, ಪುರುಷೋತ್ತಮ, ಕೆ.ರಾಮನಿಂಗ, ರಮೇಶ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News