ದಿಲ್ಲಿ : ಮಾಲಿನ್ಯ ನಿಯಂತ್ರಣಕ್ಕೆ ವಾರದೊಳಗೆ ಯೋಜನೆ ರೂಪಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2019-11-15 17:19 GMT

ಫೋಟೊ: Mint

ಹೊಸದಿಲ್ಲಿ, ನ.15: ದಿಲ್ಲಿಯಲ್ಲಿ ವಾಯುಮಾಲಿನ್ಯದ ಸಮಸ್ಯೆ ಗಂಭೀರ ಸ್ಥಿತಿಗೆ ತಲುಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ದಿಲ್ಲಿ ಹಾಗೂ ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡಿದೆ.

ದಿಲ್ಲಿಯ ವಾಯು ಗುಣಮಟ್ಟ ಸುಧಾರಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ನೀಲನಕ್ಷೆಯೊಂದನ್ನು ರೂಪಿಸಿ 7 ದಿನದೊಳಗೆ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ವಾಯು ಮಾಲಿನ್ಯ ನಿಯಂತ್ರಿಸಲು ದಿಲ್ಲಿ ಸರಕಾರ ಜಾರಿಗೆ ತಂದಿರುವ ವಾಹನ ಸಂಚಾರಕ್ಕೆ ಸಮ-ಬೆಸ ಯೋಜನೆ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಈ ಯೋಜನೆ ಜಾರಿಯಾದ ಬಳಿಕವೂ ವಾಯು ಗುಣಮಟ್ಟ ಸುಧಾರಿಸಿಲ್ಲ ಎಂದು ದಿಲ್ಲಿ ಸರಕಾರವನ್ನು ತರಾಟೆಗೆತ್ತಿಕೊಂಡಿದೆ.

 ದಿಲ್ಲಿಯಲ್ಲಿ ವಾಯುಗುಣಮಟ್ಟ ಅತ್ಯಂತ ಕಳಪೆಯಾಗಿದ್ದು ಜನತೆ ಉಸಿರಾಡಲೂ ತೊಂದರೆಯಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಆತಂಕ ಸೂಚಿಸಿದೆ. ದಿಲ್ಲಿ-ಎನ್‌ಸಿಆರ್ ವಲಯದಲ್ಲಿ ವಾಯುಮಾಲಿನ್ಯ ಕಡಿಮೆಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಸಲ್ಲಿಸುವಂತೆ ಸೂಚಿಸಿ ಪಂಜಾಬ್, ಹರ್ಯಾಣ, ಉತ್ತರಪ್ರದೇಶ ಮತ್ತು ದಿಲ್ಲಿ ಸರಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ಕಳುಹಿಸಲಾಗಿದೆ. ಅತ್ಯಂತ ಗಂಭೀರ ವಾಯುಮಾಲಿನ್ಯ ಪರಿಸ್ಥಿತಿ ಇರುವ ದಿಲ್ಲಿಯ 13 ಸ್ಥಳಗಳಲ್ಲಿ ಮಾಲಿನ್ಯ ನಿವಾರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠ ಸೂಚಿಸಿದೆ.

ಸಮ-ಬೆಸ ಯೋಜನೆಯಲ್ಲೂ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರಕ್ಕೆ ವಿನಾಯಿತಿ ನೀಡಿರುವುದನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಸಮ-ಬೆಸ ಯೋಜನೆಯಿಂದ ಏನೂ ಪ್ರಯೋಜನವಿಲ್ಲ ಎಂದು ಕೇಂದ್ರ ಸರಕಾರವೂ ದಿಲ್ಲಿ ಸರಕಾರವನ್ನು ಟೀಕಿಸಿದೆ.

  ಇದಕ್ಕೆ ಉತ್ತರಿಸಿರುವ ದಿಲ್ಲಿ ಸರಕಾರ, ಕೃಷಿ ತ್ಯಾಜ್ಯವನ್ನು ಸುಡುತ್ತಿರುವುದು ದಿಲ್ಲಿಯಲ್ಲಿ ವಾಯು ಗುಣಮಟ್ಟ ಕುಸಿಯಲು ಪ್ರಧಾನ ಕಾರಣವಾಗಿದೆ. ಸಮ-ಬೆಸ ಯೋಜನೆ ಜಾರಿಯಿಂದ ವಾಯು ಮಾಲಿನ್ಯ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ ಎಂದು ಹೇಳಿದೆ. ಆದರೆ ದಿಲ್ಲಿ ಸರಕಾರದ ಹೇಳಿಕೆಯನ್ನು ಆಕ್ಷೇಪಿಸಿದ ಸುಪ್ರೀಂಕೋರ್ಟ್, ಕೃಷಿ ತ್ಯಾಜ್ಯ ಸುಡುವ ಪ್ರಕ್ರಿಯೆಯನ್ನು ನಿಯಂತ್ರಿಸಿದ ಬಳಿಕವೂ ದಿಲ್ಲಿಯ ವಾಯು ಗುಣಮಟ್ಟ ಸುಧಾರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News