ಸಾಲಬಾಧೆ: ನೇಣು ಬಿಗಿದು ರೈತ ಆತ್ಮಹತ್ಯೆ

Update: 2019-11-15 18:34 GMT

ಮಂಡ್ಯ, ನ.15: ಸಾಲದ ಬಾಧೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಲ್ಲಾಸ್ವಾಮಿ ಅವರ ಮಗ ಎ.ಎಂ.ಕುಮಾರ್(47) ಮೃತ ರೈತ. ಸುಮಾರು ಎರಡು ಎಕರೆ ಜಮೀನು ಹೊಂದಿರುವ ಕುಮಾರ್ ಬೇಸಾಯಕ್ಕಾಗಿ  ಮಂದಗೆರೆ ವಿಜಯ ಬ್ಯಾಂಕಿನಲ್ಲಿ 2.80 ಲಕ್ಷ ರೂ., ಬೀರುವಳ್ಳಿ ಸೊಸೈಟಿಯಲ್ಲಿ 50 ಸಾವಿರ ರೂ., ಸುಮಾರು 4 ಲಕ್ಷ ರೂ. ಕೈಸಾಲ ಮಾಡಿದ್ದರು.

ಸಾಲದ ಹಣದಿಂದ ಐದಾರು ಕೊಳವೆ ಬಾವಿ ಕೊರೆಸಿ ಬೆಳೆ ಬೆಳೆಯಲು ಮುಂದಾಗಿದ್ದರು. ಸರಿಯಾಗಿ ನೀರು ಬಾರದೆ ಯಾವುದೇ ಬೆಳೆ ಬೆಳೆಯಲು  ಸಾಧ್ಯವಾಗಿರಲಿಲ್ಲ. ಇದರಿಂದ ಸಾಲದ ಬಾಧೆ ಹೆಚ್ಚಾಗಿ ತಮ್ಮ ಮನೆಯ ಮುಂಭಾಗದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮಾಜಿ ಶಾಸಕರಾದ ನಾರಾಯಣಗೌಡ, ಕೆ.ಬಿ.ಚಂದ್ರಶೇಖರ್, ಜಿಲ್ಲಾ ಪಂಚಾಯತ್ ಸದಸ್ಯ ಬಿ.ಎಲ್.ದೇವರಾಜು, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ವಿ.ಎಸ್.ಧನಂಜಯ, ತಾಲೂಕು ನಾಗರಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎನ್.ಎಸ್.ಗಂಗಾಧರ್ ಮತ್ತಿತರರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News