​ಬಿಜೆಪಿ ಮುಂದಿದೆ ಜಾರ್ಖಂಡ್ ಸವಾಲು

Update: 2019-11-16 04:07 GMT

ರಾಂಚಿ: ಜಾರ್ಖಂಡ್ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಮಿತ್ರ ಪಕ್ಷಗಳ ಜತೆ ಸ್ಥಾನ ಹೊಂದಾಣಿಕೆಗೆ ವಿಫಲವಾಗಿರುವ ಭಾರತೀಯ ಜನತಾ ಪಕ್ಷ, ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಮಾಡಬೇಕಿದೆ.

81 ಸದಸ್ಯ ಬಲದ ವಿಧಾನಸಭೆಯಲ್ಲಿ 65 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿರುವ ಅಧಿಕಾರಾರೂಢ ಪಕ್ಷಕ್ಕೆ ಈ ತಿಂಗಳ 30ರಂದು ಆರಂಭವಾಗುವ ಐದು ಹಂತಗಳ ಚುನಾವಣೆಯಲ್ಲಿ ಬಹುಕೋನ ಸ್ಪರ್ಧೆಯೇ ಬಂಡವಾಳ. ಫಲಿತಾಂಶ ಡಿಸೆಂಬರ್ 23ರಂದು ಪ್ರಕಟವಾಗಲಿದೆ.

ಮಿತ್ರಪಕ್ಷವಾದ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು) ಜತೆಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ. ಅಂತೆಯೇ ಇತರ ಎನ್‌ಡಿಎ ಮಿತ್ರ ಪಕ್ಷಗಳಾದ ಜೆಡಿಯು ಹಾಗೂ ಲೋಕ ಜನಶಕ್ತಿ ಪಾರ್ಟಿ (ಎಲ್‌ಜೆಪಿ) ಕೂಡಾ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ರಾಜ್ಯದಲ್ಲಿ 50 ಸ್ಥಾನಗಳಿಗೆ ಸ್ಪರ್ಧೆ ಮಾಡುವುದಾಗಿ ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಘೋಷಿಸಿದ್ದಾರೆ. ಬಿಜೆಪಿ ಜತೆಗಿನ ಮೈತ್ರಿ ಪ್ರಸ್ತಾವಕ್ಕೆ ಸೂಕ್ತ ಸ್ಪಂದನೆ ಸಿಕ್ಕದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸಿರುವ ಅವರು ಐವರು ಅಭ್ಯರ್ಥಿಗಳ ಹೆಸರನ್ನು ಈಗಾಗಲೇ ಘೋಷಿಸಿದ್ದಾರೆ.

ಆದರೆ ಮುಖ್ಯಮಂತ್ರಿ ರಘುಬರ ದಾಸ್ ಅವರಿಗೆ ಸರಿಸಾಟಿಯಾಗಬಲ್ಲ ನಾಯಕರು ವಿರೋಧ ಪಕ್ಷಗಳಲ್ಲಿ ಇಲ್ಲ ಎನ್ನುವುದು ಬಿಜೆಪಿಯ ನಿರೀಕ್ಷೆ. ಇದು ಬಿಜೆಪಿಗೆ ಲಾಭ ತರುತ್ತದೆ ಎಂಬ ನಿರೀಕ್ಷೆ ಪಕ್ಷದ್ದು. ಬುಡಕಟ್ಟು ಜನಾಂಗದ ಜನಸಂಖ್ಯೆ ಅಧಿಕ ಇರುವ ಈ ರಾಜ್ಯದಲ್ಲಿ ನಿರುದ್ಯೋಗ, ಕೃಷಿ ಸಮಸ್ಯೆ ಮತ್ತು ಆರ್ಥಿಕ ಹಿಂಜರಿತ ಬಿಜೆಪಿಗೆ ದೊಡ್ಡ ಸವಾಲಾಗಿದೆ.

ಕಳೆದ ಚುನಾವಣೆಯಲ್ಲಿ ಎಜೆಎಸ್‌ಯು ನೆರವಿನೊಂದಿಗೆ ಬಿಜೆಪಿ 37 ಸ್ಥಾನ ಗೆದ್ದಿತ್ತು. ಎಜೆಎಸ್‌ಯು 5 ಸದಸ್ಯರನ್ನು ಹೊಂದಿದ್ದ ಕಾರಣ 81 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತ ಸಾಧಿಸಿ ಅಧಿಕಾರದ ಸೂತ್ರ ಹಿಡಿದಿತ್ತು. ಅಧಿಕಾರ ವಿರೋಧಿ ಅಲೆಯ ಲಾಭ ವಿಪಕ್ಷಗಳಿಗೆ ಸಿಗುವ ಸಾಧ್ಯತೆ ಇಲ್ಲ; ಏಕೆಂದರೆ ವಿರೋಧ ಪಕ್ಷಗಳಲ್ಲಿ ಕೂಡಾ ಹಲವು ಬಣಗಳು ಇವೆ ಎಂದು ಬಿಜೆಪಿಯ ಉನ್ನತ ನಾಯಕರೊಬ್ಬರು ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಜೆಎಂಎಂ ಒಳಗೊಂಡ ಮಹಾಮೈತ್ರಿ ಕೂಟ ಆರ್‌ಜೆಡಿ ಜತೆಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಮಾಜಿ ಸಿಎಂ ಬಾಬುಲಾಲ್ ಮರಂಡಿ ನೇತೃತ್ವದ ಜಾರ್ಖಂಡ್ ವಿಕಾಸ ಮೋರ್ಚಾ ಪ್ರತ್ಯೇಕವಾಗಿ ಕಣಕ್ಕೆ ಇಳಿದಿದೆ. ಹೀಗೆ ವಿರೋಧಿ ಪಾಳಯದಲ್ಲಿ ಇರುವ ಒಡಕು ತನಗೆ ಲಾಭವಾಗಲಿದೆ ಎಂಬ ನಿರೀಕ್ಷೆ ಬಿಜೆಪಿ ಮುಖಂಡರದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News