ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ

Update: 2019-11-16 11:23 GMT

ಶಿವಮೊಗ್ಗ, ನ.16: ಸಿದ್ದರಾಮಯ್ಯ ಏನೇ ಹೇಳಿದರೂ ನಿಜವಾಗುವುದಿಲ್ಲ. ಅವರು ಹೇಳುವುದೆಲ್ಲ ಬರೀ ಸುಳ್ಳು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

ಶನಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಿದ್ದರಾಮಯ್ಯ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಎರಡಂಕಿ ದಾಟುವುದಿಲ್ಲ, ಕಳಪೆ ಸಾಧನೆ ಮಾಡಲಿದೆ, ನರೇಂದ್ರ ಮೋದಿ ಪ್ರಧಾನಿಯಾಗುವುದಿಲ್ಲ, ಬಿಜೆಪಿಗೆ ಬಹುಮತ ಬರುವುದಿಲ್ಲ ಎಂದೆಲ್ಲ ಹೇಳಿಕೊಂಡು ಓಡಾಡಿದ್ದರು. ಆದರೆ ಅವರು ಹೇಳಿದ್ದರಲ್ಲಿ ಒಂದೂ ನಿಜವಾಗಲಿಲ್ಲ. ಈ ಕಾರಣದಿಂದ ಸಿದ್ದರಾಮಯ್ಯ ಹೇಳಿದ್ದು ಯಾವಾಗಲೂ ಸುಳ್ಳಾಗುತ್ತದೆ. ಬಿಜೆಪಿ ಪಕ್ಷ ಏನೇ ಹೇಳಿದರೂ ಅದು ಸತ್ಯವಾಗುತ್ತೆ. ಇದಕ್ಕೆ ಸಾಕಷ್ಟು ಊದಾಹರಣೆಗಳಿವೆ ಎಂದರು.

ಉಪ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಯಂತ್ರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆಡಳಿತ ಪಕ್ಷದವರನ್ನು ಟೀಕಿಸುವುದೇ ಸಿದ್ದರಾಮಯ್ಯನವರ ಕಾಯಕ. ಅವರು ಯಾರನ್ನು ಕೇಳದೆ 8 ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ ಮಾಡಿ ಸರ್ವಾಧಿಕಾರಿಯಂತೆ ಕಾಂಗ್ರೆಸ್‍ನಲ್ಲಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ಇನ್ನು ಉಳಿದ ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ ಮಾಡುವುದಕ್ಕೆ ಕಾಂಗ್ರೆಸ್‍ಗೆ ಸಾಧ್ಯವಾಗುತ್ತಿಲ್ಲ. ಇದು ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುವುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ವಿರುದ್ಧ ಆಪಾದನೆ ಮಾಡುವುದನ್ನು ಬಿಟ್ಟರೆ ಕಾಂಗ್ರೆಸ್‍ಗೆ ಬೇರೆ ಏನೂ ಗೊತ್ತಿಲ್ಲ. ಜೆಡಿಎಸ್‍ನಲ್ಲಿ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಜನರೇ ಇಲ್ಲವಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಕುತಂತ್ರ: ಜೆಡಿಎಸ್ - ಕಾಂಗ್ರೆಸ್ ಶಾಸಕರು ಚುನಾವಣೆಗೆ ನಿಲ್ಲಬಾರದೆಂಬ ಕಾರಣದಿಂದ, ಸಿದ್ದರಾಮಯ್ಯ ಹಾಗೂ ರಮೇಶ್‍ ಕುಮಾರ್ ಸೇರಿ ಕುತಂತ್ರ ರಾಜಕಾರಣ ಮಾಡಿದರು. ಆದರೆ ಸುಪ್ರೀಂಕೋರ್ಟ್ ತೀರ್ಪು ನ್ಯಾಯ ಒದಗಿಸಿದೆ. ಚುನಾವಣೆಗೆ ಸ್ಪರ್ಧಿಸುವ ಅವಕಾಶ ನೀಡಿದೆ. ಈ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ. 15 ಜನರು ಗೆದ್ದು ಬರಲಿದ್ದಾರೆ. ಬಿಜೆಪಿ ಸರ್ಕಾರ ಪೂರ್ಣ ಬಹುಮತದೊಂದಿಗೆ ಉಳಿದ ಅವದಿ ಪೂರ್ಣಗೊಳಿಸಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಚುನಾವಣಾ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಒಂದೊಂದು ಕ್ಷೇತ್ರದಲ್ಲಿ ಮೂರು ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ. ಆದರೆ ನಮ್ಮನ್ನು ನಂಬಿ ಬಂದ ಕಾಂಗ್ರೆಸ್, ಜೆಡಿಎಸ್‍ನವರಿಗೆ ಟಿಕೆಟ್ ಕೊಟ್ಟಿದ್ದೇವೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ, ಕರ್ತವ್ಯ ನಮ್ಮ ಮೇಲಿದೆ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News