ಶಿವಮೊಗ್ಗ: ವೃತ್ತದಲ್ಲಿ ಹುತ್ತದ ಮಾದರಿ ನಿರ್ಮಿಸಿ, ಪ್ಲಾಸ್ಟಿಕ್ ಹಾವುಗಳನ್ನಿಟ್ಟು ವಿನೂತನ ಪ್ರತಿಭಟನೆ

Update: 2019-11-16 11:27 GMT

ಶಿವಮೊಗ್ಗ, ನ.16: ರಸ್ತೆಯ ಗುಂಡಿಗಳನ್ನು ಮುಚ್ಚಲು ಬೇಕಾಬಿಟ್ಟಿ ಮಣ್ಣು ತಂದು ಹಾಕಿ, ವಾಹನ ಸವಾರರಿಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಪ್ರಜಾಕೀಯ ಪಕ್ಷವು ವಿಭಿನ್ನ ರೀತಿಯಲ್ಲಿ ನಡೆಸಿದ ಪ್ರತಿಭಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕಾರಣವೇನು?: ಇತ್ತೀಚೆಗೆ ಸುರಿದ ಮಳೆಯಿಂದ ನಗರದ ರಸ್ತೆಗಳಲ್ಲಿ ಭಾರೀ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿದ್ದವು. ಇವುಗಳನ್ನು ಮುಚ್ಚಲು ಮಹಾನಗರ ಪಾಲಿಕೆ ಆಡಳಿತ ವಿಫಲವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಜಿಲ್ಲಾಧಿಕಾರಿಗಳು ಕಾಲಮಿತಿಯಲ್ಲಿ ಗುಂಡಿಗಳನ್ನು ಮುಚ್ಚುವಂತೆ ಪಾಲಿಕೆ ಆಡಳಿತಕ್ಕೆ ತಾಕೀತು ಮಾಡಿದ್ದರು.

ಇದರಿಂದ ಎಚ್ಚೆತ್ತುಕೊಂಡ ಪಾಲಿಕೆ ಆಡಳಿತವು, ಇತ್ತೀಚೆಗೆ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಂಡಿದೆ. ಈ ನಡುವೆ ನಗರದ ಪ್ರಮುಖ ವೃತ್ತವಾದ ಜೈಲ್ ಸರ್ಕಲ್‍ನಲ್ಲಿ ಕೆಲ ದಿನಗಳ ಹಿಂದೆ, ಅಭಿವೃದ್ದಿ ಕೆಲಸಕ್ಕೆಂದು ಗುಂಡಿ ತೆಗೆಯಲಾಗಿತ್ತು. ಈ ಗುಂಡಿ ಮುಚ್ಚಲು ಸುಮಾರು ಎರಡು ಅಡಿಯಷ್ಟು ಮಣ್ಣು ಹಾಕಿ ಹೋಗಲಾಗಿತ್ತು. ಸಮರ್ಪಕವಾಗಿ ಸಮತಟ್ಟು ಮಾಡಿರಲಿಲ್ಲ. ಇದರಿಂದ ಜನ-ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರಿಗೆ ಭಾರೀ ತೊಂದರೆಯಾಗಿತ್ತು. ಇದೆಲ್ಲದರ ಹೊರತಾಗಿಯೂ ಮಣ್ಣು ಸಮತಟ್ಟಗೊಳಿಸಲು ಪಾಲಿಕೆ ಆಡಳಿತವಾಗಲಿ ಅಥವಾ ಗುಂಡಿ ತೆಗೆದವರಾಗಲಿ ಯಾವುದೆ ಕ್ರಮಕೈಗೊಂಡಿರಲಿಲ್ಲ ಎಂದು ಆರೋಪಿಸಲಾಗಿದೆ.

ಪ್ರತಿಭಟನೆ: ಇದನ್ನು ಗಮನಿಸಿದ ಪ್ರಜಾಕೀಯ ಪಕ್ಷದ ಸ್ಥಳೀಯ ಕಾರ್ಯಕರ್ತರು ಶನಿವಾರ ಬೇಕಾಬಿಟ್ಟಿಯಾಗಿ ಹಾಕಿದ್ದ ಮಣ್ಣಿನ ಬಳಿ ಹುತ್ತದ ಮಾದರಿ ರಚಿಸಿ, ಪ್ಲಾಸ್ಟಿಕ್‍ನ ಹಾವುಗಳನ್ನು ತಂದಿಟ್ಟು, ಹೂವು, ಕುಂಕುಮ ಹಾಕಿ, ಊದಿನ ಕಡ್ಡಿಗಳನ್ನಿಟ್ಟು ಪೂಜಿಸಿದರು. ಈ ಮೂಲಕ ಆಡಳಿತದ ನಿರ್ಲಕ್ಷ್ಯವನ್ನು ಸಾರ್ವಜನಿಕರ ಗಮನ ಸೆಳೆಯುವ ಕಾರ್ಯ ನಡೆಸಿದರು.

ವೈರಲ್: ಪ್ರಜಾಕೀಯ ಪಕ್ಷದ ಈ ವಿನೂತನ ಪ್ರತಿಭಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ವಿಭಿನ್ನ ಪ್ರತಿಭಟನೆಗೆ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ, ಆಡಳಿತದ ನಿರ್ಲಕ್ಷ್ಯಕ್ಕೆ ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News