'ಬಿಜೆಪಿ ಸೇರ್ಪಡೆ' ಕುರಿತ ಶರತ್ ಬಚ್ಚೇಗೌಡ ಆರೋಪಕ್ಕೆ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದು ಹೀಗೆ...

Update: 2019-11-16 12:41 GMT

ಬೆಂಗಳೂರು, ನ.16: ನಾನು ನಡೆಸುವಂತಹ ಎಲ್ಲ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆಯನ್ನು ಪಾವತಿಸಿಕೊಂಡು ಬರುತ್ತಿದ್ದೇನೆ. ತೆರಿಗೆ ವಂಚಿಸುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ ಎಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ಐಟಿ ಹಾಗೂ ಈ.ಡಿ.ಯಿಂದ ಬಚಾವಾಗಲು ಎಂಟಿಬಿ ನಾಗರಾಜ್ ಬಿಜೆಪಿ ಸೇರಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ನಿನ್ನೆ ಮಾಡಿದ್ದ ಆರೋಪಕ್ಕೆ ಇಂದು ಹೊಸಕೋಟೆಯಲ್ಲಿ ಅವರು ಈ ಮೇಲಿನಂತೆ ತಿರುಗೇಟು ನೀಡಿದರು.

ನಾನು ಓರ್ವ ಉದ್ಯಮಿಯಾಗಿದ್ದು, ನನಗೆ ಹಲವು ಬಗೆಯಲ್ಲಿ ವರಮಾನ ಬರುತ್ತದೆ. ಆದಾಯ ತೆರಿಗೆಯನ್ನು ಪಾವತಿಸದೇ ವಂಚನೆ ಮಾಡುವವರು ದೇಶದ್ರೋಹಿಗಳು. ನಾನು ಯಾವುದೇ ರೀತಿಯ ತೆರಿಗೆಯನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ನಾಗರಾಜ್ ಹೇಳಿದರು.

ಹಣಕ್ಕಾಗಿ ನಾನು ಬಿಜೆಪಿ ಸೇರ್ಪಡೆಯಾಗಿಲ್ಲ. ಅದರ ಅಗತ್ಯವೂ ನನಗಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕ್ಷೇತ್ರದ ಮತದಾರರ ಮೇಲೆ ನನಗೆ ನಂಬಿಕೆಯಿದೆ. ಆದುದರಿಂದಲೇ, ಹೊಸದಾಗಿ ಜನರ ಆಶೀರ್ವಾದ ಪಡೆಯಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಂದು ಇಲ್ಲಿ ಪ್ರಚಾರ ಮಾಡಿದರೆ ನಾನೇಕೆ ಹೆದರಿಕೊಳ್ಳಲಿ. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ನನಗೆ ಎದುರಾಳಿಗಳೇ ಅಲ್ಲ ಎಂದು ನಾಗರಾಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News