ಹಾಸನ: ಇಬ್ಬರ ನಡುವಿನ ಜಗಳ ಬಿಡಿಸಲು ಹೋದ ವ್ಯಕ್ತಿಯ ಕೊಲೆ

Update: 2019-11-16 14:27 GMT

ಹಾಸನ, ನ.16: ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ನಡೆದ ಜಗಳದಲ್ಲಿ ವ್ಯಕ್ತಿಯೋರ್ವರು ಕೊಲೆಯಾಗಿದ್ದು, ಇದರಿಂದ ರೊಚ್ಚಿಗೆದ್ದ ಮೃತನ ಸಂಬಂಧಿಕರು ಕೊಲೆ ಮಾಡಿದ ವ್ಯಕ್ತಿಯ ಮನೆಗೆ ಬೆಂಕಿ ಹೆಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಡರಾತ್ರಿ ಹಾಸನ ಜಿಲ್ಲೆಯ ಆಲೂರು ತಾಲೂಕು ಹಾಂಜಿಹಳ್ಳಿಯಲ್ಲಿ ನಡೆದಿದೆ.

ಬಸವೇಶ್ವರ ನಗರದ ವಾಸಿ ರಾಮು (44) ಮೃತ ವ್ಯಕ್ತಿ. ತಾಲೂಕಿನ ಹಾಂಜಿಹಳ್ಳಿ ಗ್ರಾಮದಲ್ಲಿ ನಿನ್ನೆ ಧರ್ಮಾಪುರಿ ಗ್ರಾಮದ ಗಂಗಾಧರ್ ಎಂಬಾತ ಕಾರ್ಮಿಕರನ್ನು ಪಿಕಪ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಹಾಂಜಿಹಳ್ಳಿ ಗ್ರಾಮದ ಮಹೇಶ್ ಎಂಬವರ ನಾಯಿಗೆ ವಾಹನ ಢಿಕ್ಕಿ ಹೊಡೆದಿದೆ. ನಂತರ ಈ ವಿಚಾರಕ್ಕಾಗಿ ಸ್ಥಳದಲ್ಲಿ ಗಲಾಟೆ ನಡೆದಿದೆ. ಊರಿನವರು ರಾಜಿ ಪಂಚಾಯಿತಿ ಮಾಡಿ ಗಾಯಗೊಂಡ ನಾಯಿಗೆ ಚಿಕಿತ್ಸೆಗಾಗಿ ಹಣ ಕೊಡಿಸಿ ಇಬ್ಬರನ್ನೂ ಸಮಾಧಾನ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಆದರೆ ಇಷ್ಟಕ್ಕೇ ಸುಮ್ಮನಾಗದೆ ಮಹೇಶ ಮತ್ತು ಗಂಗಾಧರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತು ಜಗಳಕ್ಕೆ ತಿರುಗಿ ಅತಿರೇಕಕ್ಕೆ ಹೋದಾಗ ಮಹೇಶ ಗಂಗಾಧರನಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಗಂಗಾಧರನ ಸ್ನೇಹಿತ ರಾಮು ಎಂಬವರು ಜಗಳ ಬಿಡಿಸಿಕೊಳ್ಳಲು ಬಂದಿದ್ದು, ಜಗಳದ ನಡುವೆ ರಾಮುವಿನ ಕುತ್ತಿಗೆ ಭಾಗಕ್ಕೆ ಮಚ್ಚಿನೇಟು ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

ಮೃತದೇಹವು ಹಾಸನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಗಾಯಗೊಂಡಿರುವ ಗಂಗಾಧರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ ಕೊಲೆಯಾದ ರಾಮುವಿನ ಸಂಬಂಧಿಕರು ಮತ್ತು ಹಲ್ಲೆಗೊಳಗಾದ ಗಂಗಾಧರ್ ಸ್ನೇಹಿತರು ಹಾಂಜಿಹಳ್ಳಿಗೆ ತೆರಳಿ ಕೊಲೆ ಆರೋಪಿ ಮಹೇಶನ ಮನೆಗೆ ಬೆಂಕಿ ಹಚ್ಚಿದ್ದಾರೆ. ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಮನೆಯ ಮುಂದೆ ನಿಲ್ಲಿಸಿದ್ದ ಮಾರುತಿ ವ್ಯಾನ್ ಮತ್ತು ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ ಎನ್ನಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮಹೇಶನ ಮನೆಯವರು ತಲೆ ಮರೆಸಿಕೊಂಡಿದ್ದಾರೆ.

ಆಲೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಿಗುವಿನ ವಾತಾವರಣ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ. ಕೊಲೆ ಹಾಗೂ ಮನೆಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ದೂರು ದಾಖಲಿಸಿ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News