ಉಪಚುನಾವಣೆಯಲ್ಲಿ ಬಿಜೆಪಿ 8 ಸ್ಥಾನ ಗೆಲ್ಲುವುದಿಲ್ಲ: ಸಿದ್ದರಾಮಯ್ಯ

Update: 2019-11-16 15:53 GMT

ಮೈಸೂರು,ನ.16: ಬಿಜೆಪಿಯವರು ಉಪಚುನಾವಣೆಯಲ್ಲಿ 8 ಸ್ಥಾನ ಗೆಲ್ಲುವುದಿಲ್ಲ. ಉಪಚುನಾವಣೆ ನಂತರ ಬಿಜೆಪಿಗೆ ಸಂಕಷ್ಟ ಇದೆ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಉಪಚುನಾವಣೆಯಲ್ಲಿ ಅಕ್ರಮ ಮಾಡಲು ಸಜ್ಜಾಗಿದ್ದಾರೆ. ಮೈಸೂರಿನಲ್ಲಿ ಯೋಗೇಶ್ವರ್ ಫೋಟೋ ಇರುವ ಸೀರೆಗಳು ಸಿಕ್ಕಿವೆ. ಇದೆಲ್ಲಾ ಚುನಾವಣಾ ಅಕ್ರಮವನ್ನು ಎತ್ತಿ ತೋರಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಅನರ್ಹ ಶಾಸಕರ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೋರ್ಟ್ ತೀರ್ಪು ಬಂದ ನಂತರ ಒಬ್ಬೊಬ್ಬರೇ ಸತ್ಯ ಹೇಳುತ್ತಿದ್ದಾರೆ. ಜನರಿಗೆ ಅದು ಈಗ ಅರ್ಥವಾಗುತ್ತಿದೆ. ಅವರು ಏನೇ ಕಥೆ ಹೇಳಿದರೂ ಅನರ್ಹತೆ ಪಟ್ಟಿಯಲ್ಲೇ ಜನರ ಮುಂದೆ ಹೋಗಬೇಕು. ಅವರಿಗಂಟಿರುವ ಅನರ್ಹತೆ ಪಟ್ಟ ಹೋಗಿಲ್ಲ. ರಮೇಶ್ ಜಾರಕಿಹೊಳಿಯ ಮಾತುಗಳಿಗೆ ಕಿಮ್ಮತ್ತಿಲ್ಲ. ಅನರ್ಹರಾಗಿರುವ ಕಾರಣ ಏನೇನೋ ಮಾತನಾಡುತ್ತಿದ್ದಾರೆ. ಅನರ್ಹರೆಲ್ಲ ತ್ಯಾಗಿಗಳಲ್ಲ, ಸ್ವಾರ್ಥಿಗಳು. ಇವರೇನು ಸ್ವಾತಂತ್ರ್ಯ ಹೋರಾಟ ಮಾಡಿದ್ದಾರಾ ? ತ್ಯಾಗ ಮಾಡಿದ್ದಾರಾ? ತ್ಯಾಗ ಮಾಡಿದ್ದು ಗಾಂಧಿ, ನೆಹರು, ಇಂದಿರಾಗಾಂಧಿ, ಸೋನಿಯಾಗಾಂಧಿ. ಅನರ್ಹ ಶಾಸಕರೆಲ್ಲಾ ಸ್ವಾರ್ಥಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

ಅನರ್ಹರನ್ನು ಸಚಿವರಾಗಿ ಮಾಡುವ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಇದು ಚುನಾವಣೆ ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವೇ. ಬಿಜೆಪಿಗೆ ಯಾವುದೇ ನೀತಿ ಸಂಹಿತೆ ಅಡ್ಡಿ ಇರುವುದಿಲ್ಲ. ಬಿಜೆಪಿ ಇಂತಹ ಮಾತು ಅಕ್ರಮಗಳಿಂದ ಚುನಾವಣೆ ಎದುರಿಸಲು ಸಜ್ಜಾಗಿದೆ. ಶಂಕರ್ ರನ್ನು ಎಂಎಲ್‍ಸಿ ಮಾಡಿ ಮಂತ್ರಿ ಮಾಡ್ತಿನಿ ಎಂದು ಸಿಎಂ ಅವರೇ ಹೇಳುತ್ತಾರೆ. ಇಂತವರೆಲ್ಲ ಸಿಎಂ ಸ್ಥಾನದಲ್ಲಿ ಕೂರಬೇಕಾ ಎಂದು ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News