ಸಂವಿಧಾನ ಅಭಿಯಾನ ಕೈಪಿಡಿಯಲ್ಲಿ ಅಂಬೇಡ್ಕರ್‌ರಿಗೆ ಅವಮಾನ: ಬೇಷರತ್ ಕ್ಷಮೆ ಕೇಳಿದ ಸಿಎಂಸಿಎ

Update: 2019-11-16 16:37 GMT

ಬೆಂಗಳೂರು, ನ.16: ಸಂವಿಧಾನ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವ ಸಲುವಾಗಿ ರೂಪಿಸಲಾಗಿದ್ದ ಅಭಿಯಾನದ ಕೈಪಿಡಿಯಲ್ಲಿ ಅಂಬೇಡ್ಕರ್‌ರವರ ಕೊಡುಗೆಗೆ ಚ್ಯುತಿ ತರುವ ಉದ್ದೇಶವಿರಲಿಲ್ಲ ಎಂದು ಸಿಎಂಸಿಎ ಸ್ಪಷ್ಟನೆ ನೀಡಿದೆ.

ಸಿಎಂಸಿಎ ವತಿಯಿಂದ ಸಂವಿಧಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಸಂವಿಧಾನದ ದಿನವನ್ನು ಆಚರಿಸಲು ಶಿಕ್ಷಣ ಇಲಾಖೆಯೊಂದಿಗೆ ಅಭಿಯಾನದ ಕೈಪಿಡಿ, ಪೋಸ್ಟರ್‌ಗಳು ಮತ್ತು ಕಿರುನಾಟಕವನ್ನು ನಡೆಸಿಕೊಂಡು ಬರುತ್ತಿದೆ. ಇಲಾಖೆಯು ಪ್ರತಿವರ್ಷವೂ ಇದನ್ನು ಒಂದು ಸುತ್ತೋಲೆಯ ರೂಪದಲ್ಲಿ ತಮ್ಮ ವೆಬ್ ಸೈಟ್‌ನಲ್ಲಿ ಪ್ರಕಟಿಸುತ್ತಾ ಬರುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ನಮ್ಮ ಸಂವಿಧಾನದ ಶಿಲ್ಪಿ ಹಾಗೂ ಪಿತಾಮಹ ಎಂಬುದು ಸ್ಥಾಪಿತವಾದ ಸತ್ಯವಾಗಿದೆ. ಇದನ್ನು ಸಿಎಂಸಿಎ ಸಂಸ್ಥೆಯು ಸಂಪೂರ್ಣವಾಗಿ ನಂಬಿದೆ. ಹೀಗಾಗಿ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಪಾತ್ರವನ್ನು ಕಡಿಮೆಯಾಗಿ ತೋರಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ನಮ್ಮ ಅಭಿಯಾನದ ಕರಡು, ಬರಹದಲ್ಲಿ ತಪ್ಪಾಗಿದೆ. ಈ ತಪ್ಪನ್ನು ಅರಿತ ತಕ್ಷಣವೇ ಅಭಿಯಾನದ ಕೈಪಿಡಿಯನ್ನು ಹಿಂಪಡೆಯಲಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅವರ ವಿಚಾರಧಾರೆಗಳು ಸಿಎಂಸಿಎ ಸಂಸ್ಥೆಯ ಎಲ್ಲ ಕಾರ್ಯಕ್ರಮಗಳಿಗೂ ಸದಾ ಪ್ರೇರಣೆಯಾಗಿರುತ್ತದೆ. ಈ ನಮ್ಮ ಉದ್ದೇಶಪೂರ್ವಕವಲ್ಲದ ತಪ್ಪಿನಿಂದ ಯಾವುದಾದರು ವ್ಯಕ್ತಿಗೆ, ಸಂಸ್ಥೆಗೆ ಅಥವಾ ಸಮುದಾಯದ ಭಾವನೆಗಳಿಗೆ ನೋವುಂಟಾಗಿದ್ದಲ್ಲಿ, ಅದಕ್ಕಾಗಿ ಸಿಎಂಸಿಎ ಬೇಷರತ್ತಾಗಿ ಕ್ಷಮಾಪಣೆ ಕೇಳುತ್ತದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಏನಿದು ಪ್ರಕರಣ: ಸಿಎಂಸಿಎ(ಸ್ವಯಂ ಸೇವಾ ಸಂಸ್ಥೆ) ರೂಪಿಸಿದ್ದ ಸಂವಿಧಾನ ಕುರಿತು ಅಭಿಯಾನದ ಕೈಪಿಡಿಯಲ್ಲಿ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೇ ರಚಿಸಿಲ್ಲ. ಅವರು ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿದ್ದರಷ್ಟೆ ಎಂಬ ರೀತಿಯಲ್ಲಿ ಬರೆಯಲಾಗಿತ್ತು. ಈ ಕೈಪಿಡಿಯನ್ನು ಶಿಕ್ಷಣ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಹಾಗೆಯೇ ಪ್ರಕಟಿಸಿತ್ತು. ಇದನ್ನು ಗಮನಿಸಿದ ದಲಿತಪರ ಸಂಘಟನೆಗಳು, ಸಂವಿಧಾನ ತಜ್ಞರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News