ಪಿಎಂಸಿ ಬ್ಯಾಂಕ್ ಆಡಿಟರ್‌ಗಳ ಕಸ್ಟಡಿ ಅವಧಿ ವಿಸ್ತರಣೆ

Update: 2019-11-16 17:04 GMT

ಮುಂಬೈ, ನ.16: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್(ಪಿಎಂಸಿ)ನಲ್ಲಿ ಬೆಳಕಿಗೆ ಬಂದಿರುವ 4,355 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿರುವ ಬ್ಯಾಂಕ್‌ನ ಇಬ್ಬರು ಖಾಸಗಿ ಲೆಕ್ಕಪತ್ರ ಪರಿಶೋಧಕರ ಪೊಲೀಸ್ ಕಸ್ಟಡಿ ಅವಧಿಯನ್ನು ನ್ಯಾಯಾಲಯ ನವೆಂಬರ್ 19ರವರೆಗೆ ವಿಸ್ತರಿಸಿದೆ.

ಬಂಧಿತರನ್ನು ಇನ್ನಷ್ಟು ವಿಚಾರಣೆ ನಡೆಸಬೇಕಿದ್ದು ಕಸ್ಟಡಿ ಅವಧಿ ವಿಸ್ತರಿಸಬೇಕು ಎಂಬ ಕೋರಿಕೆಯನ್ನು ನ್ಯಾಯಾಲಯ ಮಾನ್ಯ ಮಾಡಿದೆ ಎಂದು ತನಿಖಾಧಿಕಾರಿ ಕಿಶೋರ್ ಪರಬ್ ಹೇಳಿದ್ದಾರೆ.

 ನವೆಂಬರ್ 11ರಂದು ಜಯೇಶ್ ಸಂಘಾನಿ ಮತ್ತು ಕೇತನ್ ಲಕ್ಡಾವಾಲಾರನ್ನು ಮುಂಬೈ ಪೊಲೀಸ್ ಆರ್ಥಿಕ ಅಪರಾಧ ವಿಭಾಗ(ಇಒಡಬ್ಲ್ಯು) ಬಂಧಿಸಿತ್ತು. ಅಲ್ಲದೆ ಆರ್‌ಬಿಐಯ ನಾಲ್ವರು ಲೆಕ್ಕಪತ್ರ ಪರಿಶೋಧಕರನ್ನೂ ವಿಚಾರಣೆ ನಡೆಸಿದೆ.

ಆರ್‌ಬಿಐ ನಡೆಸಿದ ಪರಿಶೋಧನೆಯಲ್ಲಿ ಲೆಕ್ಕಪತ್ರದಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಸಂಘಾನಿ ಮತ್ತು ಲಕ್ಡಾವಾಲಾ ಇದನ್ನು ಕಡೆಗಣಿಸಿದ್ದರು. ಇವರಿಬ್ಬರು 2014-15ರಿಂದ 2018-19ರವರೆಗಿನ ಐದು ವರ್ಷದಲ್ಲಿ ಬ್ಯಾಂಕ್‌ನ ಲೆಕ್ಕಪತ್ರದ ಬಗ್ಗೆ ಯಾವುದೇ ಪ್ರತಿಕೂಲ ಅಭಿಪ್ರಾಯ ಮಂಡಿಸಿರಲಿಲ್ಲ. ಇದು ಉದ್ದೇಶಪೂರ್ವಕ ಲೋಪ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ. ಪಿಎಂಸಿಯ ಮೂರನೇ ಲೆಕ್ಕಪತ್ರ ಪರಿಶೋಧಕಿ ಅನಿತಾ ಕಿರ್ದತ್ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

  ಬ್ಯಾಂಕ್‌ನ ಲೆಕ್ಕಪತ್ರಗಳನ್ನು ದೈನಂದಿನ ಪರಿಶೋಧನೆ ನಡೆಸುತ್ತಿರುವ ಇನ್ನಿಬ್ಬರು ಸಹಾಯಕ ಆಡಿಟರ್‌ಗಳಾದ ಅರ್ಚಿತಾ ಶಾ ಮತ್ತು ಕೋಮಲ್ ಶಾ ಅವರನ್ನೂ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ, ಆದರೆ ಬಂಧಿಸಿಲ್ಲ. ಇವರನ್ನು ಸಂಘಾನಿಯ ಶಿಫಾರಸ್ಸಿನ ಮೇರೆಗೆ ನೇಮಕ ಮಾಡಿಕೊಳ್ಳಲಾಗಿದ್ದು 2014ರಿಂದ 2019ರ ವರೆಗೆ ಲೆಕ್ಕಪತ್ರ ಪರಿಶೋಧನೆ ನಡೆಸಿದ್ದಾರೆ. ಬ್ಯಾಂಕ್‌ನಲ್ಲಿ ಠೇವಣಿಯಿಟ್ಟಿರುವ 20 ಜನರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗುವುದು. ಇದು ಪ್ರಕರಣಕ್ಕೆ ಹೆಚ್ಚಿನ ಬಲ ತುಂಬಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News