ಮೈಸೂರು: 30 ಸಾವಿರ ಸೀರೆಗಳು ಜಪ್ತಿ; ಬಿಜೆಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ದೂರು

Update: 2019-11-16 17:36 GMT

ಮೈಸೂರು,ನ.16: ಹುಣಸೂರಿನಲ್ಲಿ ನಡೆಯುತ್ತಿರುವ ಉಪಚುನಾವಣೆಗೆ ಹಂಚಲು ತಂದಿದ್ದರೆನ್ನಲಾದ ಸೀರೆಯನ್ನು ಮೈಸೂರಿನ ವಿಜಯನಗರದ ಬಳಿಯಲ್ಲಿರುವ ಮನೆಯೊಂದರಿಂದ ಪೊಲೀಸರು ವಶಕ್ಕೆ ಪಡೆದ ಹಿನ್ನೆಲೆ ಬಿಜೆಪಿ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.

ಬಿಜೆಪಿ ವಿರುದ್ಧ ಎಸಿ ಡಾ.ವೆಂಕಟರಾಜುಗೆ ದಾಖಲೆಗಳ ಸಮೇತ ಕಾಂಗ್ರೆಸ್ ನಿಯೋಗ ಶನಿವಾರ ದೂರು ನೀಡಿದೆ. 'ಬಿಜೆಪಿಯಿಂದ ಹುಣಸೂರು ಉಪ ಚುನಾವಣೆಗಾಗಿ ಹಂಚಲು ತಂದಿದ್ದ 30,000 ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೀರೆ ಚೀಲಗಳ ಮೇಲೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಬಿಜೆಪಿ ನಾಯಕರ ಫೋಟೊಗಳಿವೆ. ಆದರೆ ವಿಜಯನಗರದ ಗಂಗಣ್ಣ ಎಂಬವರ ಮೇಲೆ ಎಫ್ಐಆರ್ ದಾಖಲಾಗಿದೆ.  ಅಧಿಕಾರಿಗಳು ಸಹ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಚುನಾವಣಾ ಆಯೋಗ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವ ಬಗ್ಗೆ ಅನುಮಾನವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಅನರ್ಹ ಶಾಸಕ ಎಚ್.ವಿಶ್ವನಾಥ್ ಹುಣಸೂರನ್ನು ಜಿಲ್ಲೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಇದೂ ಕೂಡಾ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ.  ಈ ವಿಚಾರವಾಗಿ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಿಜೆಪಿ ವಿರುದ್ಧ ಎಸಿ ವೆಂಕಟರಾಜು ಅವರಿಗೆ ಕಾಂಗ್ರೆಸ್ ನಿಯೋಗ ದೂರು ಸಲ್ಲಿಸಿತು.

ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ನೇತೃತ್ವದಲ್ಲಿ ದೂರು ನೀಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ, ಕೆಪಿಸಿಸಿ ಸದಸ್ಯ ಹೆಡತಲೆ ಮಂಜುನಾತ್, ಸುನೀಲ್ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News