ಈ ಪಕ್ಷದಲ್ಲಿನ್ನು ರಾಜಕೀಯ ತಂತ್ರಗಾರಿಕೆಗೆ ವಿಶೇಷ ಸಮಿತಿ

Update: 2019-11-17 03:54 GMT

ಹೊಸದಿಲ್ಲಿ, ನ.17: ಚುನಾವಣೆ ನಿರ್ವಹಣೆ ಮತ್ತು ಸೃಜನಾತ್ಮಕ ಹಾಗೂ ತಂತ್ರಗಾರಿಕೆಯ ಯೋಚನೆಗಳಿಗಾಗಿಯೇ ಎರಡು ವಿಶೇಷ ಸಮಿತಿಗಳನ್ನು ರಚಿಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆ.

ಪಕ್ಷದ ಕೇಂದ್ರೀಯ ಕಾರ್ಯಕಾರಿ ಸಮಿತಿ ಹಾಗೂ ಕೇಂದ್ರೀಯ ಚುನಾವಣಾ ಸಮಿತಿ ಮಾದರಿಯಲ್ಲಿ ಚುನಾವಣೆ ನಿರ್ವಹಣೆ ಸಮಿತಿ ರಚನೆಯಾಗಲಿದ್ದು, ಇದು ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಚಾರ ತಂತ್ರವನ್ನು ರೂಪಿಸಿ ಅನುಷ್ಠಾನಗೊಳಿಸಲು ನೆರವಾಗಲಿದೆ. ಇದು ಪಕ್ಷದೊಳಗೆ ಖಾಯಂ ಸಮಿತಿಯಾಗಿದ್ದು, ಇದರಲ್ಲಿ ಸಾಮಾಜಿಕ ಜಾಲತಾಣ, ಡಾಟಾ ಅನಾಲಿಟಿಕ್ಸ್, ಸಂವಹನ ಮತ್ತು ಸಂಶೋಧನಾ ತಂಡಗಳ ಅಧ್ಯಕ್ಷರು ಸದಸ್ಯರಾಗಿ ಇರುತ್ತಾರೆ. ಪಕ್ಷದ ಕಾರ್ಯತಂತ್ರ ರೂಪಿಸುವ ಹಿರಿಯ ಮುಖಂಡ ಜೈರಾಂ ರಮೇಶ್ ಸಮಿತಿಯ ಅಧ್ಯಕ್ಷರಾಗುವ ನಿರೀಕ್ಷೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.

ಇನ್ನೊಂದು ಸಮಿತಿ ಹೊಸ ರಾಜಕೀಯ ಸ್ಥಿತಿಗೆ ಅನುಗುಣವಾದ ಹೊಸ ಕಲ್ಪನೆಗಳನ್ನು ಮತ್ತು ಕಾರ್ಯತಂತ್ರಗಳನ್ನು ರೂಪಿಸಲಿದೆ. ಇದು ಪಕ್ಷದ ನಾಗರಿಕ ಮತ್ತು ಸಾಮಾಜಿಕ ವಿಸ್ತರಣೆ ವಿಭಾಗವನ್ನು ಪುನರ್‌ರಚಿಸಲಿದೆ. ಇದನ್ನು ರಚನಾತ್ಮಕ ಕಾಂಗ್ರೆಸ್ ಎಂದು ಹೆಸರಿಸಲಾಗುತ್ತಿದೆ. ಈ ವಿಭಾಗದ ಆರಂಭಿಕ ಕಾರ್ಯಸೂಚಿಯೆಂದರೆ, ಸ್ವಯಂಸೇವಾ ಸಂಸ್ಥೆಗಳು, ನಾಗರಿಕ ಹಕ್ಕು ಸಂಸ್ಥೆಗಳು ಮತ್ತು ಹೋರಾಟಗಾರರ ಜತೆ ತೊಡಗಿಸಿಕೊಂಡು ಪಕ್ಷದ ವಿಸ್ತರಣೆಗೆ ಆದ್ಯತೆ ನೀಡುವುದು ಎಂದು ಹಿರಿಯ ಮುಖಂಡರೊಬ್ಬರು ವಿವರಿಸಿದ್ದಾರೆ.

ನಾಗರಿಕ ವಿಸ್ತರಣೆ ಸಮಿತಿಯು ಎಲ್ಲ ರಾಜ್ಯಗಳಲ್ಲಿ ತಂಡಗಳನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ಎಲ್ಲ ರಾಜ್ಯಗಳಲ್ಲಿ ಒಬ್ಬ ಮಹಿಳೆ ಸೇರಿದಂತೆ ತಲಾ ಮೂರು ಮಂದಿಯನ್ನು ನಿಯೋಜಿಸುವಂತೆ ಈಗಾಗಲೇ ಎಲ್ಲ ರಾಜ್ಯ ಘಟಕಗಳ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ವ್ಯಕ್ತಿಗಳು ನಾಗರಿಕ ಸಮಾಜ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಸಾಮಾಜಿಕ ಸಂಘ ಸಂಸ್ಥೆಗಳು, ಮಹಿಳಾ ಮಂಡಲಗಳು, ದತ್ತಿ ಕಾನೂನಿನಡಿ ನೋಂದಣಿಯಾದ ಸಂಸ್ಥೆಗಳ ಜತೆ ಸಂಬಂಧಗಳನ್ನು ಬೆಳೆಸುವ ಜವಾಬ್ದಾರಿ ಹೊಂದಿರುತ್ತವೆ. ನವೆಂಬರ್ 21-23ರ ವೇಳೆಗೆ ಇದನ್ನು ಅಂತಿಮಪಡಿಸುವ ಸಲುವಾಗಿ ಸಭೆ ಕರೆಯಲಾಗುತ್ತಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News