ಆಮ್ಲಜನಕ ಮಾರಾಟಕ್ಕಿದೆ!

Update: 2019-11-18 06:05 GMT

ನಾವು ಹುಟ್ಟಿದ ದಿನದಿಂದ ಸೂರ್ಯ ದಿನವೂ ಬಿಡದೆ ನಮಗೆ ಬೆಳಕನ್ನು ಕೊಟ್ಟಿದೆ. ಅದೆಂದೂ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿಲ್ಲ ಅಥವಾ ಒಂದು ದಿನವೂ ಅದರ ಯಂತ್ರ ಕೆಟ್ಟು ನಿಂತಿಲ್ಲ. ಅಷ್ಟೇ ಅಲ್ಲ, ಅದ್ಭುತವೆಂದರೆ ಇಡೀ ಜಗತ್ತಿಗೆ ಬೆಳಕು ನೀಡುತ್ತಿದ್ದರೂ, ಯಾವತ್ತೂ ಅದಕ್ಕಾಗಿ ನಾವು ಬಿಲ್ ಪಾವತಿ ಮಾಡಿಲ್ಲ. ಅಥವಾ ‘ಬಿಲ್ ಕಟ್ಟಿಲ್ಲ’ ಎನ್ನುವ ಕಾರಣಕ್ಕಾಗಿ ಸೂರ್ಯನ ಬೆಳಕನ್ನು ಅದರ ನಿಯಂತ್ರಕ ತಡೆದಿಲ್ಲ. ಇದು ಸೂರ್ಯನ ಬೆಳಕಿಗೆ ಮಾತ್ರ ಅನ್ವಯ ಅಲ್ಲ. ಶತಶತಮಾನಗಳಿಂದ ಮನುಷ್ಯ, ಪ್ರಾಣಿಗಳು ಉಸಿರಾಡುತ್ತಾ ಬಂದಿವೆ. ನಾವು ಉಸಿರಾಡುವ ಆಮ್ಲಜನಕ್ಕಾಗಿಯೂ ಎಂದಿಗೂ ಹಣವನ್ನು ತೆತ್ತ ಉದಾಹರಣೆಯಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಅದರ ನಿಯಂತ್ರಕ ಎಂದಿಗೂ ‘ದರ ಪಾವತಿ ಮಾಡಿ’ ಎಂಬ ನೋಟಿಸ್ ಕಳಿಸಿಲ್ಲ. ನೀರು, ಮಳೆ...ಹೀಗೆ ಪ್ರಕೃತಿದತ್ತವಾದ ಎಲ್ಲವನ್ನೂ ಮನುಷ್ಯ ಪುಕ್ಕಟೆಯಾಗಿಯೇ ಅನುಭವಿಸುತ್ತಾ ಬಂದಿದ್ದಾನೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಯಾವುದೇ ವರ್ಗ, ಜಾತಿ ಭೇದಗಳಿಲ್ಲದೆ ಇವುಗಳು ಹಂಚಿಕೆಯಾಗಿವೆ. ಕೆಳಜಾತಿಯವನ ಮನೆಗೂ, ಮೇಲ್ಜಾತಿಯವನ ಮನೆಗೂ ಸಮಾನವಾಗಿಯೇ ಸೂರ್ಯ ಬೆಳಕನ್ನು ನೀಡುತ್ತಾನೆ. ಶ್ರೀಮಂತ-ಬಡವ ಎನ್ನುವ ಭೇದವನ್ನು ಕೂಡ ಮಾಡದೇ ಗಾಳಿ, ಬೆಳಕು, ನೀರನ್ನು ಪ್ರಕೃತಿ ಹಂಚುತ್ತಾ ಬಂದಿದೆ. ಒಂದು ವೇಳೆ ಇವೆಲ್ಲವುಗಳಿಗೆ ಮನುಷ್ಯ ದರವನ್ನು ಪಾವತಿ ಮಾಡಬೇಕು ಎಂಬ ಸ್ಥಿತಿ ಬಂದರೆ ಏನಾಗಬಹುದು? ಊಹಿಸುವುದೂ ಕಷ್ಟ. ಆದರೆ ದುರದೃಷ್ಟಕ್ಕೆ ತನಗೆ ಯಾವ ನಿಯಂತ್ರಣ ಇಲ್ಲದಿದ್ದರೂ ಸೂರ್ಯ, ಗಾಳಿ, ಬೆಳಕು ಇತ್ಯಾದಿಗಳ ಹಕ್ಕುಸಾಧಿಸಲು ಹೊರಟಿರುವ ಮನುಷ್ಯ, ಅವುಗಳ ಮೇಲೆ ದರ ವಿಧಿಸುವ ವಾತಾವರಣವನ್ನು ನಿರ್ಮಿಸುತ್ತಿದ್ದಾನೆ.

   ಒಂದು ಕಾಲದಲ್ಲಿ ‘ಆತ ಹಣವನ್ನು ನೀರಿನಂತೆ ಚೆಲ್ಲುತ್ತಿದ್ದಾನೆ’ ಎಂಬ ಹೇಳಿಕೆ ಆಡು ಬಳಕೆಯಲ್ಲಿತ್ತು. ಆದರೆ ಇದೀಗ ಹೊಸತೊಂದು ಭವಿಷ್ಯವನ್ನು ನಾವು ಸೃಷ್ಟಿಸಲಿದ್ದೇವೆ. ಆ ಭವಿಷ್ಯದಲ್ಲಿ ‘ಆತ ನೀರನ್ನು ಹಣದಂತೆ ಚೆಲ್ಲುತ್ತಿದ್ದಾನೆ’ ಎಂಬ ಟೀಕೆ ಬಳಕೆಗೆ ಬರಲಿದೆ. ಯಾವ ಹಣವೂ ನೀರನ್ನು ಸೃಷ್ಟಿಸಲಾರವು ಎಂಬ ಅರಿವು ಮನುಷ್ಯ ಅತಿ ಶೀಘ್ರದಲ್ಲಿ ತನ್ನದಾಗಿಸಲಿದ್ದಾನೆ. ಒಂದು ಕಾಲದಲ್ಲಿ ಹಳ್ಳಿಗಳು ನದಿಗಳಿಗೆ ಆವಾಸವಾಗಿದ್ದವು. ಜನ ಜೀವನವನ್ನು ಪೊರೆಯುವ ತೊಟ್ಟಿಲಾಗಿತ್ತು. ಅದು ಎಲ್ಲ ಸೊತ್ತಾಗಿ ಬಳಕೆಯಲ್ಲಿತ್ತು. ಆದರೆ ಇಂದು, ನದಿಗಳ ನೀರು ಬಳಸುವುದು ಅಷ್ಟು ಸುಲಭವಿಲ್ಲ. ಅದರ ಬಳಕೆಗೆ ನಾವಿಂದು ಸರಕಾರದ ಅನುಮತಿ ಪಡೆಯಬೇಕಾಗಿದೆ. ಕಡಲಿಗೂ ಬೇಲಿ ಹಾಕುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಮನುಷ್ಯನ ಸ್ವಯಂಅಪರಾಧಗಳಿಂದಾಗಿ ನದಿಗಳು ಕಲುಷಿತಗೊಂಡಿವೆ. ಅಂತರ್ಜಲ ಬತ್ತುತಿದೆ. ನೀರಿಲ್ಲದೆ ಮನುಷ್ಯ ಬದುಕುವುದಕ್ಕೆ ಸಾಧ್ಯವಿಲ್ಲವಾದುದರಿಂದ, ಆತ ಅದನ್ನು ಹಣಕೊಟ್ಟು ತನ್ನದಾಗಿಸಿಕೊಳ್ಳುವ ಸನ್ನಿವೇಶವನ್ನು ನಿರ್ಮಿಸಿಕೊಂಡಿದ್ದಾನೆ. ‘ಶುದ್ಧ ನೀರು’ ಹಣ ತೆತ್ತು ಕುಡಿಯಬೇಕಾಗಿದೆ. ಮುಂದೊಂದು ದಿನ ಶುದ್ಧವೋ, ಅಶುದ್ಧವೋ ಕುಡಿಯುವ ನೀರನ್ನು ಹಣಕೊಟ್ಟು ಪಡೆದುಕೊಳ್ಳಲೇ ಬೇಕಾದ ಸನ್ನಿವೇಶ ನಿರ್ಮಾಣವಾಗಲಿದೆ. ಶುದ್ಧ ನೀರನ್ನು ಬಾಟಲಿಯಲ್ಲಿ ಮಾರುವುದಕ್ಕೆ ಯಾವಾಗ ಆರಂಭಿಸಿದರೋ ಆಗ ‘ಇನ್ನು ಸೇವಿಸುವ ಗಾಳಿಯನ್ನೂ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಬಹುದು’ ಎಂದು ತಮಾಷೆಗೆ ಹೇಳುತ್ತಿದ್ದರು. ದುರದೃಷ್ಟ ವಶಾತ್ ಆ ತಮಾಷೆ ಇಂದು ನಿಜವಾಗಿದೆ. ಇಂದು ದಿಲ್ಲಿಯಲ್ಲೇ ಶುದ್ಧ ಗಾಳಿ ಮಾರಾಟಕ್ಕಿದೆ.

 ಈ ದೇಶದ ರಾಜಧಾನಿ ದಿಲ್ಲಿಯ ಸ್ಥಿತಿ ದಯನೀಯವಾಗಿದೆ. ಈ ದೇಶದ ಪರಿಸರ, ಜಲ, ನದಿಗಳ ಕುರಿತಂತೆ ನೀತಿ ರೂಪಿಸುವ ರಾಜಧಾನಿ ಉಸಿರಾಟಕ್ಕೆ ಯೋಗ್ಯವಲ್ಲದ ಪ್ರದೇಶವಾಗಿ ಗುರುತಿಸಲ್ಪಡುತ್ತಿದೆ. ಕಳೆದ ಶುಕ್ರವಾರ ವಾಯುಮಟ್ಟದ ಸೂಚ್ಯಂಕ 527ಕ್ಕೆ ತಲುಪುವ ಮೂಲಕ ಇಡೀ ವಿಶ್ವದಲ್ಲೇ ದಿಲ್ಲಿ ಅತಿಹೆಚ್ಚು ವಾಯು ಮಾಲಿನ್ಯ ನಗರವಾಗಿ ಗುರುತಿಸಲ್ಪಟ್ಟಿತು. ಸಾಧಾರಣವಾಗಿ ಪ್ರಕೃತಿ ವಿಕೋಪ, ಅತಿವೃಷ್ಟಿಯಂತಹ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ಆದರೆ ದಿಲ್ಲಿಯಲ್ಲಿ ಉಸಿರಾಡುವ ಗಾಳಿ ಮಾಲಿನ್ಯಗೊಂಡ ಕಾರಣಕ್ಕೆ ರಜೆ ನೀಡಲಾಯಿತು. ವಿದ್ಯಾರ್ಥಿಗಳು ಮುಖವಾಡ ಧರಿಸಿಕೊಂಡು ಶಾಲೆ, ಕಾಲೇಜುಗಳಿಗೆ ಹೊರಡಬೇಕಾದ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಅಭಿವೃದ್ಧಿಯ ಕಟ್ಟ ಕಡೆಯ ಹಂತ ನಮ್ಮನ್ನು ಯಾವ ಸ್ಥಿತಿಗೆ ತಲುಪಿಸಬಹುದು ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಇದೀಗ ಅಲ್ಲಿನ ಜನರು ಶುದ್ಧ ಗಾಳಿಯನ್ನು ಹಣ ಕೊಟ್ಟು ಕೊಂಡುಕೊಳ್ಳಬೇಕಾದ ಸ್ಥಿತಿ ಬಂದಿದೆ.ಆಮ್ಲಜನಕದ ಬಾರ್‌ಗಳು ಈಗ ದಿಲ್ಲಿಯಲ್ಲಿ ತೆರೆಯುತ್ತಿವೆ. ಶುದ್ಧ ಗಾಳಿಗೆ ಪರಿತಪಿಸುವ ನಾಗರಿಕರು ಇಲ್ಲಿಗೆ ಧಾವಿಸುತ್ತಿದ್ದಾರೆ. ಹದಿನೈದು ನಿಮಿಷ ಅವಧಿಯ ಗಾಳಿಗೆ ಇಲ್ಲಿ ರೂಪಾಯಿ 299ರಿಂದ 499ರವರೆಗೆ ಪಡೆಯಲಾಗುತ್ತದೆ. ಜಾಗತಿಕವಾಗಿಯೂ ಶುದ್ಧ ಆಮ್ಲಜನಕವನ್ನು ಮಾರುವ ದಂಧೆ ಆರಂಭವಾಗಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ತೆರುತ್ತಿರುವ ಬೆಲೆಯಿದು. ದುರಂತವೆಂದರೆ, ಅಭಿವೃದ್ಧಿಯ ಹೆಸರಿನಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳು, ಓಡಾಡುವ ವಾಹನಗಳು ಪ್ರಕೃತಿಯನ್ನು ಕೆಡಿಸುತ್ತವೆಯಾದರೂ, ಅದರ ಮೊದಲ ಬಲಿಪಶು ಬಡವರ್ಗದ ಜನರೇ ಆಗಿದ್ದಾರೆ. ಹಣ ಸಂಪಾದಿಸಲು ಪ್ರಕೃತಿಯನ್ನು ಕೆಡಿಸಿದವರು ಹಣದ ಮೂಲಕ ಆಮ್ಲಜನಕವನ್ನು ಕೊಂಡುಕೊಳ್ಳುತ್ತಿದ್ದಾರೆ. ಆದರೆ ಪರಿಸರ ಮಾಲಿನ್ಯದಲ್ಲಿ ಯಾವ ಪಾತ್ರವೂ ಇಲ್ಲದ ಬಡಜನರು ಮಾತ್ರ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಸಹಜವಾಗಿ ಸಿಗುವ ಆಮ್ಲಜನಕವನ್ನು ಹಣದ ಮೂಲಕ ಯಾವತ್ತೂ ಕೊಂಡುಕೊಳ್ಳಲು ಸಾಧ್ಯವಿಲ್ಲ.

ದಿಲ್ಲಿಯ ಇಂದಿನ ಸ್ಥಿತಿ ಇಡೀ ದೇಶಕ್ಕೆ ಒಂದು ಎಚ್ಚರಿಕೆಯಾಗಿದೆ. ಅಭಿವೃದ್ಧಿಯನ್ನು ಕೇವಲ ನಗರ ಕೇಂದ್ರಿತವಾಗಿಸುವುದರ ದುಷ್ಪರಿಣಾಮವಿದು. ಒಂದು ವರದಿಯ ಪ್ರಕಾರ ಚೆನ್ನೈ, ಬೆಂಗಳೂರು ಸೇರಿದಂತೆ ಹಲವು ನಗರಗಳ ನಳ್ಳಿಯ ನೀರು ಕುಡಿಯುವುದಕ್ಕೆ ಅಯೋಗ್ಯವಾಗಿದೆ. ಇದು ಮೊದಲ ಹಂತ. ಎರಡನೆಯ ಹಂತದಲ್ಲಿ ಸೇವಿಸುವ ಗಾಳಿಯೂ ಅಯೋಗ್ಯವಾಗಿರುತ್ತದೆ. ನಾವು ನಡೆದಾಡುವ ಮಣ್ಣಂತೂ ಎಂದೋ ವಿಷಮಯವಾಗಿದೆ. ಸೂರ್ಯನ ಬೆಳಕು ಕೆಡಿಸುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕಷ್ಟೇ ಅದು ಉಳಿದುಕೊಂಡಿದೆ. ಆದರೆ ಅದಕ್ಕೂ ಸರ್ವ ಪ್ರಯತ್ನಗಳು ನಡೆಯುತ್ತಿವೆ. ಮನುಷ್ಯನ ಮೂಲಭೂತ ಅಗತ್ಯವಾಗಿರುವ, ಅವನ ಅಸ್ತಿತ್ವಕ್ಕೆ ಅನಿವಾರ್ಯವಾಗಿರುವ ನೀರು, ಗಾಳಿ, ಬೆಳಕು, ಮಣ್ಣು ಇವುಗಳನ್ನು ಕೆಡಿಸಿ ನಾವು ತಲುಪುವ ಅಭಿವೃದ್ಧಿ ಅಂತಿಮವಾಗಿ ಇಡೀ ಮನುಕುಲವನ್ನೇ ದುರಂತದೆಡೆಗೆ ತಲುಪಿಸುತ್ತದೆ. ಈ ಸಂದೇಶವನ್ನು ದಿಲ್ಲಿ ದೇಶಕ್ಕೆ ಮಾತ್ರವಲ್ಲ, ವಿಶ್ವಕ್ಕೇ ನೀಡುತ್ತಿದೆ. ಅಭಿವೃದ್ಧಿಯ ಕುರಿತಂತೆ, ನಗರ ಕಲ್ಪನೆಯ ಕುರಿತಂತೆ ಮರು ಚಿಂತಿಸುವುದಕ್ಕೆ ಇದು ಸಕಾಲವಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News