ಹನೂರು: ಶಿಕ್ಷಣ ಸಚಿವರ ಆಗಮನಕ್ಕೆ ಸಜ್ಜಾಗುತ್ತಿದೆ ಗೋಪಿನಾಥಮ್ ಗ್ರಾಮ

Update: 2019-11-17 18:33 GMT

ಹನೂರು, ನ.17: ಶಿಕ್ಷಣ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ ಕುಮಾರ್ ರವರು ತಾಲೂಕಿನ ಗೋಪಿನಾಥಮ್ ಗ್ರಾಮದಲ್ಲಿ ಶಾಲಾ ವಾಸ್ತವ್ಯಕ್ಕಾಗಿ ನ.18 ರಂದು ಆಗಮಿಸುತ್ತಿರುವ ಹಿನ್ನೆಲೆ ಅಭಿವೃದ್ದಿ ಕಾಮಗಾರಿಗಳಿಂದ ಶಾಲೆ ಮತ್ತು ಗ್ರಾಮ ಸಜ್ಜಾಗುತ್ತಿದೆ.

ತಾಲೂಕಿನ ಗಡಿಹಂಚಿನಲ್ಲಿರುವ ಗೋಪಿನಾಥಮ್ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಸಚಿವರು ಶಾಲೆಯಲ್ಲಿ ವಾಸ್ತವ್ಯ ಹೂಡುವ ಹಿನ್ನಲೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ವೃಂದ ರವಿವಾರ ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ದೌಡಾಯಿಸಿ ಗ್ರಾಮ ಹಾಗೂ ಸಚಿವರು ವಾಸ್ತವ್ಯ ಹೂಡುವ ಶಾಲೆಯಲ್ಲಿ ಯಾವುದೇ ಸಮಸ್ಯೆಗಳು ಇರದಂತೆ ಎಚ್ಚರ ವಹಿಸಿ ತಾವೇ ಖುದ್ದಾಗಿ ನಿಂತು ಅಗತ್ಯ ಕ್ರಮಕೈಗೂಂಡಿದ್ದಾರೆ. ಅಲ್ಲದೆ ಗ್ರಾಮದ ಹಲವು ಬಡಾವಣೆಗಳಲ್ಲಿ ಕೆಲ ಅಭಿವೃದ್ದಿ ಕೆಲಸಗಳು ಸೇರಿ ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಮತ್ತು ಸ್ವಚ್ಚತೆ ಮಾಡಲು ಮುಂದಾಗಿದ್ದಾರೆ.

ಬದಲಾವಣೆ ಆಗಲಿ: ಸಚಿವರು ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆಂದು ಜಿಲ್ಲೆ ವಿವಿಧ ಅಧಿಕಾರಿಗಳು ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರದಿಂದ ಓಡೋಡಿ  ಗಡಿ ಹಂಚಿನ ಗ್ರಾಮಕ್ಕೆ ಆಗಮಿಸಿ ಗ್ರಾಮದಲ್ಲಿರುವ ಶಾಲೆ ಸೇರಿದಂತೆ ಅನೇಕ ಕಡೆ ಕೆಲ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಈ ಗ್ರಾಮದ ಗ್ರಾಮಸ್ಥರು ಸಮಸ್ಯೆಗಳನ್ನು ಹೊತ್ತುಕೊಂಡು ಅಧಿಕಾರಿಗಳಿರುವ ಕಚೇರಿಗಳಿಗೆ ಹೋದರೂ ಸಹ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗದೇ ವಿನಾಕಾರಣ ವಿಳಂಬವಾಗುತ್ತಿತ್ತು. ಆದರೆ ಈಗ ನಮ್ಮ ಬಳಿಯ ಎಲ್ಲಾ ಅಧಿಕಾರಿಗಳು ಆಗಮಿಸುತ್ತಿರುವುದು ಕೊಂಚ ಸಂತಸ ತಂದಿದ್ದಾದರೂ ಜಿಲ್ಲಾ ಉಸ್ತುವಾರಿ ಸಚಿವರ ಶಾಲಾ ವಾಸ್ತವ್ಯದಿಂದ ಏನಾದರೂ ಮುಂದೆ ಬದಲಾವಣೆ ಆದರೆ ಮಾತ್ರ ಇವರ ವಾಸ್ತವ್ಯಕ್ಕೆ ಒಂದು ಅರ್ಥ ಸಿಗಲು ಸಾದ್ಯ ಎಂದು ಗ್ರಾಮಸ್ಥರು ಹೇಳಿಕೊಳ್ಳುತ್ತಿದ್ದಾರೆ.

ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ: ಸಚಿವರು ನ.18ರ ಸಂಜೆ ಗೋಪಿನಾಥಮ್ ಶಾಲೆಯಲ್ಲಿ ವಾಸ್ತವ್ಯ ಹೂಡಿ ಗ್ರಾಮಸ್ಥರು, ಶಿಕ್ಷಕರು, ಮಕ್ಕಳ ಜೊತೆ ಸಂವಾದ ಮಾಡಿದ ಬಳಿಕ ನ.19 ರ ಳಗ್ಗೆ ತಾಲೂಕಿನ ಪುದೂರು, ಪಾಲಾರ್, ವಡೆಕಹಳ್ಳ, ಬಿದರಹಳ್ಳಿ ಶಾಲೆಗಳಿಗೂ ಭೇಟಿ ನೀಡಲಿದ್ದಾರೆ. ಬಳಿಕ ಸುಳ್ವಾಡಿ ವಿಷ ಪ್ರಹಸನದ ಪ್ರಕರಣದ ಸಂತ್ತಸ್ತರನ್ನು ಭೇಟಿ ಮಾಡಲಿದ್ದಾರೆ.

ಅಭಿವೃದ್ದಿ ಬಗ್ಗೆ ಚರ್ಚಿಸಿಲಿ: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ ಕುಮಾರ್ ರವರು ಜಿಲ್ಲಾ ಕೇಂದ್ರಕ್ಕೆ ಹಲವು ಭಾರಿ ಭೇಟಿ ನೀಡಿದ್ದರೂ ಸಹ ಈ ಹಿಂದೆ ಜಗದೀಶ್‍ ಶೆಟ್ಟರ್ ಮತ್ತು ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‍ನಲ್ಲಿ ಘೋಷಣೆಯಾಗಿದ್ದ ಹನೂರು ತಾಲೂಕಿನ  ಅಭಿವೃದ್ದಿ ಸಂಬಂಧ ಮಾತನಾಡದೇ ಮೌನವಹಿಸಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೇವಲ ಘೋಷಣೆಗೆ ಮಾತ್ರ ಸಿಮೀತವಾದ ಹನೂರು ತಾಲೂಕು ಕೇಂದ್ರದಲ್ಲಿ ತಾಲೂಕಿಗೆ ಸಂಬಂಧಿಸಿದ ಕಚೇರಿಗಳನ್ನು ತೆರೆಯದೇ ಇರುವುದರಿಂದ ಇಂದಿಗೂ ಸಹ ಹಳೆಯ ತಾಲೂಕು ಕೊಳ್ಳೇಗಾಲಕ್ಕೆ ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗಾಗಿ ಹೋಗುತ್ತಿದ್ದಾರೆ. ಸಚಿವರು ಗೋಪಿನಾಥಮ್ ಗ್ರಾಮದಲ್ಲಿ ಕೇವಲ ವಾಸ್ತವ್ಯ ಹೂಡಿ ನಿರ್ಗಮಿಸದೆ ಗ್ರಾಮಸ್ಥರು ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Writer - ಅಭಿಲಾಷ್‍ ಗೌಡ

contributor

Editor - ಅಭಿಲಾಷ್‍ ಗೌಡ

contributor

Similar News