ಮುಹಮ್ಮದ್ ಘೋರಿಯಂತಹ ಬಿಜೆಪಿಯನ್ನು ಮಹಾರಾಷ್ಟ್ರದಲ್ಲಿ ಬೆಳೆಯಲು ಬಿಡಬಾರದಾಗಿತ್ತು: ಶಿವಸೇನೆ

Update: 2019-11-19 10:10 GMT

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಕಸರತ್ತು ವಿಫಲವಾದ ನಂತರ ಮುರಿದು ಬಿದ್ದಿರುವ ಬಿಜೆಪಿ-ಶಿವಸೇನೆ ಮೈತ್ರಿಯ ಹಿನ್ನೆಲೆಯಲ್ಲಿ ಇಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿನ ಸಂಪಾದಕೀಯಲ್ಲಿ ಬಿಜೆಪಿಯನ್ನು 12ನೇ ಶತಮಾನದ ಮುಹಮ್ಮದ್ ಘೋರಿಗೆ ಹೋಲಿಸಿದೆ. ಬಿಜೆಪಿಯನ್ನು ಮಹಾರಾಷ್ಟ್ರದಲ್ಲಿ ಇಷ್ಟೊಂದು ಬೆಳೆಯಲು ಬಿಡಬಾರದಾಗಿತ್ತು ಎಂದು ಹೇಳಿದೆ.

``ಘೋರಿಯನ್ನು 17 ಬಾರಿ ಸೋಲಿಸಿದ ನಂತರವೂ ಆತನನ್ನು ಬದುಕಲು ಬಿಟ್ಟ ಪೃಥ್ವಿರಾಜ್ ಚೌಹಾಣ್ ಮಾಡಿದ ತಪ್ಪನ್ನೇ ನಾವು ಮಾಡಿ ಬಿಟ್ಟಿದ್ದೇವೆ. ಘೋರಿ ಕೊನೆಗೆ ಇನ್ನಷ್ಟು ಬಲಶಾಲಿಯಾಗಿ ಚೌಹಾಣ್‍ ನನ್ನೇ  18ನೇ ಯುದ್ಧದಲ್ಲಿ  ಜೈಲಿಗೆ ತಳ್ಳಿ ಹಿಂಸಿಸಿದ'' ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

``ಹಿಂದೆ ಸೇನೆ ಕೂಡ ಮಹಾರಾಷ್ಟ್ರದಲ್ಲಿ ಇಂತಹ ದೇಶದ್ರೋಹಿಗಳನ್ನು ಕ್ಷಮಿಸಿದೆ ಹಾಗೂ ಅದಕ್ಕೆ ಬೆಲೆಯನ್ನೂ ತೆತ್ತಿದೆ. ಈಗ ಅವರು ಸೇನೆಯ ಮೇಲೆಯೇ ದಾಳಿ ನಡೆಸಲು ಯತ್ನಿಸುತ್ತಿದ್ದಾರೆ'' ಎಂದೂ ಬರೆಯಲಾಗಿದೆ.

ಎನ್‍ ಡಿಎ ಮೈತ್ರಿ ಕೂಟದಿಂದ ಸೇನೆಯನ್ನು ಕಿತ್ತೆಸೆದು ಅದರ ಸಂಸದರನ್ನು ವಿಪಕ್ಷಗಳ ಸಾಲಿನಲ್ಲಿ ಕುಳ್ಳಿರಿಸಿದ ಬಿಜೆಪಿಯ ನಡೆಯನ್ನೂ ತೀವ್ರವಾಗಿ ಟೀಕಿಸಿದ ಶಿವಸೇನೆ "ರಾಜಕೀಯದಲ್ಲಿ ಯಾರೂ ಹಿಂದುತ್ವ ಹಾಗೂ ರಾಷ್ಟ್ರವಾದದ ಬಗ್ಗೆ ಮಾತನಾಡದ ಸಮಯದಲ್ಲಿ ಶಿವಸೇನೆ ಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಎನ್‍ಡಿಎಯನ್ನು ಇತರರೊಂದಿಗೆ  ಸೇರಿ ಸ್ಥಾಪಿಸಿದ್ದರು. ಠಾಕ್ರೆ ಅವರು ವಾಜಪೇಯಿ, ಅಡ್ವಾಣಿ, ಜಾರ್ಜ್ ಫೆರ್ನಾಂಡಿಸ್, ಪ್ರಕಾಶ್ ಸಿಂಗ್ ಬಾದಲ್ ಜತೆಗೆ ಎನ್‍ಡಿಎಗೆ ಶಂಕುಸ್ಥಾಪನೆ ಹಾಕಿದಾಗ ಇಂದಿನ ಅನೇಕ ನಾಯಕರು ಹುಟ್ಟಿರಲಿಲ್ಲ ಎಂಬುದನ್ನು ಇಂದು ಎನ್‍ಡಿಎ ನಡೆಸುತ್ತಿರುವವರು ತಿಳಿಯಬೇಕು'' ಎಂದು ಸಾಮ್ನಾ ಸಂಪಾದಕೀಯದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News