ಬನಾರಸ್ ವಿವಿಯ ಸಂಸ್ಕೃತ ವಿಭಾಗಕ್ಕೆ ಮುಸ್ಲಿಂ ಪ್ರೊಫೆಸರ್ ನೇಮಕದ ವಿರುದ್ಧ ಪ್ರತಿಭಟನೆ

Update: 2019-11-19 10:28 GMT
Photo:Facebook/Firoze Khan

ಹೊಸದಿಲ್ಲಿ: ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ವಿದ್ಯಾಧರಂ ವಿಜ್ಞಾನ ಕೇಂದ್ರಕ್ಕೆ ಸಹಾಯಕ ಪ್ರೊಫೆಸರ್ ಆಗಿ ಹನ್ನೊಂದು ದಿನಗಳ ಹಿಂದೆಯಷ್ಟೇ ನೇಮಕಗೊಂಡಿದ್ದ ಫಿರೋಝ್ ಖಾನ್ ಇದೀಗ ಭೂಗತರಾಗಿದ್ದು, ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಸಂಸ್ಕೃತದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದವರಾಗಿದ್ದಾರೆ ಫಿರೋಝ್.

ಆದರೆ  ಅವರ ನೇಮಕಾತಿಯನ್ನು ವಿರೋಧಿಸಿ ಕೇಂದ್ರದ ಸುಮಾರು 20 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಉಪಕುಲಪತಿಗಳ  ನಿವಾಸದೆದುರು ಸೋಮವಾರ ಹವನ ಕುಂಡ ರಚಿಸಿ ಧರಣಿ ಕುಳಿತಿದ್ದಾರೆ. ಅವರ ನೇಮಕವಾದಂದಿನಿಂದ ಪ್ರತಿಭಟನೆಗಳು ನಡೆಯುತ್ತಿದ್ದು ಅವರೊಬ್ಬ ಮುಸ್ಲಿಂ ಎಂಬ ಕಾರಣಕ್ಕಾಗಿಯೇ ಈ ಪ್ರತಿಭಟನೆಗಳು ನಡೆಯುತ್ತಿವೆ. ಅವರು ನವೆಂಬರ್ 7ರಂದು ಕರ್ತವ್ಯಕ್ಕೆ ಹಾಜರಾದಂದಿನಿಂದ ತರಗತಿಗಳು ನಡೆಯುತ್ತಿಲ್ಲ.

ಫಿರೋಝ್ ಅವರು ಸಂಸ್ಕೃತ ಶಾಸ್ತ್ರಿ (ಪದವಿ) ಹಾಗೂ ಶಿಕ್ಷಾ ಶಾಸ್ತ್ರಿ (ಬಿಎಡ್), ಆಚಾರ್ಯ (ಸ್ನಾತ್ತಕೋತ್ತರ ಪದವಿ) ಪಡೆದಿದ್ದು  2018ರಲ್ಲಿ ಜೈಪುರದ ಡೀಮ್ಡ್ ವಿವಿ ಆಗಿರುವ ರಾಷ್ಟ್ರೀಯ ಸಂಸ್ಕೃತ ಪ್ರತಿಷ್ಠಾನದಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಎನ್‍ಇಟಿ ಹಾಗೂ ಜೆಆರ್‍ಎಫ್ ಪರೀಕ್ಷೆಗಳಲ್ಲೂ ಅವರು ತೇರ್ಗಡೆ ಹೊಂದಿದ್ದಾರೆ.

ಸಂಸ್ಕೃತ ಕಲಿಕೆಗೂ ಕಲಿಸುವಿಕೆಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲವೆಂದು ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲು ವಿವಿ ಆಡಳಿತ ಸಮರ್ಥವಾಗಿಲ್ಲ.

ವಿವಿಯ ಇತರ ವಿಭಾಗದ ವಿದ್ಯಾರ್ಥಿಗಳು ಪ್ರತಿಭಟನಾಕಾರರನ್ನು ವಿರೋಧಿಸುತ್ತಿದ್ದು ಖಾನ್ ಅವರ ಅರ್ಹತೆಗಳ ಆಧಾರದಲ್ಲಿ ಆವರು ತಮ್ಮ ಹುದ್ದೆ ನಿರ್ವಹಿಸಲು ಸಮರ್ಥರು ಎಂದು ಹೇಳುತ್ತಿದ್ದಾರೆ.

``ಜೀವನಪರ್ಯಂತ ಸಂಸ್ಕೃತ ಕಲಿತಿದ್ದೇನೆ. ಆದರೆ ಈಗ ಕಲಿಸಲು ಯತ್ನಿಸುತ್ತಿರುವಾಗ ನಾನು ಮುಸ್ಲಿಮರಾಗಿರುವುದೇ ದೊಡ್ಡ ವಿಚಾರವಾಗಿದೆ'' ಎಂದು ಖಾನ್ ಹೇಳಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News