ಸಾಮೂಹಿಕ ನಾಯಕತ್ವದಡಿಯಲ್ಲಿ ಉಪಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್ ಗೆ ಗೆಲುವು ಖಚಿತ: ಡಾ.ಜಿ. ಪರಮೇಶ್ವರ

Update: 2019-11-19 11:40 GMT

ಬೆಂಗಳೂರು: ಸ್ವಾತಂತ್ರ್ಯ ಪಡೆದ ಪ್ರಾರಂಭದಲ್ಲಿ ಭಾರತದ ಅಭಿವೃದ್ಧಿಗೆ ನೆಹರೂ ಅವರು ಅಡಿಪಾಯ ಹಾಕಿದರು. ಈ ಪಾಯದ ಮೇಲೆ ಭವ್ಯ ಭಾರತ ನಿರ್ಮಿಸಿದವರು ಇಂದಿರಾಗಾಂಧಿ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು. ದೇಶದ ಜನರ ಹಸಿವು ಮುಕ್ತ ಮಾಡುವ ನಿಟ್ಟಿನಲ್ಲಿ ಹಸಿರು ಕ್ರಾಂತಿ ಮೂಲಕ ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗುವಂತೆ ಮಾಡಿದರು.  ಸಾಮಾಜಿಕ, ರಾಜಕೀಯ ಅವಕಾಶವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಿದರು.

ಇಂದಿರಾ ಗಾಂಧಿಯವರ 102ನೇ ಜನ್ಮದಿನದ ಅಂಗವಾಗಿ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಅರ್ಪಿಸಿ ಅವರು ಮಾತನಾಡುತ್ತಿದ್ದರು. ದಲಿತರು ಸಹ ರಾಜಕೀಯದಲ್ಲಿ ಬೆಳೆಯುವ ವಾತಾವರಣವನ್ನು ಇಂದಿರಾ ಗಾಂಧಿಯವರು ನಿರ್ಮಿಸಿದರು ಎಂದು ಸ್ಮರಿಸಿದರು‌.

ಭಾರತ ಜಾತ್ಯತೀತ ಸಮಾಜ. ಎಲ್ಲಾ ಧರ್ಮಿಗರಿಗೂ ಸಮಾನ ಅವಕಾಶವನ್ನು ಸಂವಿಧಾನದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಮೂಲ ತತ್ವದ ಅಡಿಪಾಯವನ್ನು ಕಾಂಗ್ರೆಸ್ ಹಾಕಿಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಿಂದೂ ರಾಷ್ಟ್ರ ಕಟ್ಟುತ್ತೇವೆ ಎನ್ನುವ ಮಾತು ಕೇಳಿಬರುತ್ತಿದೆ. ಈ ನಡೆ ಜನರಿಗೆ ಎಷ್ಟು ಒಪ್ಪಿಗೆ ಆಗಲಿದೆ ಎಂಬುದನ್ನು ಅವಲೋಕಿಸಬೇಕಿದೆ ಎಂದರು. ಭಾರತದಲ್ಲಿ ಎಲ್ಲಾ ಅಲ್ಪಸಂಖ್ಯಾತರಿಗೂ ಸಮಾನತೆ ಇದೆ. ಭಾರತ ವಿಭಿನ್ನತೆಯಲ್ಲಿ ಏಕತೆಯನ್ನು ಹೊಂದಿದೆ. ಅದನ್ನು ಕಾಂಗ್ರೆಸ್‌ ಅನುಸರಿಸಿಕೊಂಡು ಬಂದಿದೆ. ಈ ತತ್ವವೇ ಮುಂದುವರೆಯಬೇಕಿದ್ದರೆ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದೆ ಎಂದರು.

54 ವರ್ಷ ಕೇಂದ್ರದಲ್ಲಿ ಆಡಳಿತನ ನಡೆಸಿದ ಕಾಂಗ್ರೆಸ್ ಭಾರತವನ್ನು ಆರ್ಥಿಕವಾಗಿ ಎತ್ತರಕ್ಕೆ ಕೊಂಡೊಯ್ದಿತ್ತು. ಆದರೆ, ಪ್ರಸ್ತುತ ಆರ್ಥಿಕ ವ್ಯವಸ್ಥೆ ನೆಲಕಚ್ವಿದೆ. ಸಣ್ಣ ವ್ಯಾಪಾರ ನಡೆಸುವವರು ಜಿಎಸ್‌ಟಿ ಹೊಡೆತದಿಂದ ಉದ್ಯಮ ತೊರೆಯುವ ಮಟ್ಟಕ್ಕೆ ತಲುಪಿದ್ದಾರೆ. ಇಂಥ ಕೆಟ್ಟ ಆಡಳಿತ ನೀಡುತ್ತಿರುವ ಸರಕಾರವನ್ನು ಬದಲಿಸಬೇಕಿದೆ ಎಂದು ಡಾ. ಪರಮೇಶ್ವರ ಅವರು ಹೇಳಿದರು.

ನಮ್ಮ ಸಮ್ಮಿಶ್ರ ಸರಕಾರವಿದ್ದ ವೇಳೆ ಕರ್ನಾಟಕಕ್ಕೆ 1.54 ಲಕ್ಷ ಕೋಟಿ ರೂಪಾಯಿ ಹೂಡಿಕೆ ಹರಿದು ಬಂದಿತ್ತು. ಆದರೆ ಈಗಿನ ಬಿಜೆಪಿ ಸರಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸೋತಿದೆ. ಕೇಂದ್ರದಿಂದ ನಿರೀಕ್ಷಿತ ಪರಿಹಾರ ಬಂದಿಲ್ಲ. ಅಷ್ಟೆ ಅಲ್ಲ, ಬಂಡವಾಳ ಹೂಡಿಕೆಯಲ್ಲೂ ರಾಜ್ಯ ಸರಕಾರ ಹಿಂದೆ ಬಿದ್ದಿದೆ ಎಂದರು.

ಕರ್ನಾಟಕದಲ್ಲಿ ಉಪಚುನಾವಣೆ ಆಗಮಿಸಿದೆ. ಕಾಂಗ್ರೆಸ್‌ನಲ್ಲಿ ಸಾಮೂಹಿಕ ನಾಯಕತ್ವದಡಿಯಲ್ಲಿ ಚುನಾವಣೆ ಎದುರಿಸಿದರೆ ಖಂಡಿತ ಕಾಂಗ್ರೆಸ್ ಎಲ್ಲಾ ಕ್ಷೇತ್ರದಲ್ಲೂ ಗೆಲ್ಲಲು ಸಾಧ್ಯ. ಈ ಬಾರಿ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News