ಶಿವಮೊಗ್ಗ: ಮಹಿಳೆಯನ್ನು ಅಪಹರಿಸಿ ದರೋಡೆ ಮಾಡಿದ್ದ ಮೂವರು ಆಟೋ ಚಾಲಕರಿಗೆ 7 ವರ್ಷ ಜೈಲು ಶಿಕ್ಷೆ

Update: 2019-11-19 12:10 GMT

ಶಿವಮೊಗ್ಗ, ನ. 19: ಮಹಿಳೆಯೋರ್ವರನ್ನು ಅಪಹರಿಸಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ನಗನಾಣ್ಯ ದೋಚಿ ಪರಾರಿಯಾಗಿದ್ದ ಮೂವರು ಆಟೋ ಚಾಲಕರಿಗೆ ಇಲ್ಲಿನ 3 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ. 

ಪದ್ಮಾ ಟಾಕೀಸ್ ಬಳಿಯ ನಿವಾಸಿ ಮುಬಾರಕ್ ಖಾನ್ (21) ತುಂಗಾ ನಗರ ಬಡಾವಣೆ ಸಮೀರ್ (28) ಮತ್ತು ಟಿಪ್ಪುನಗರದ ನಯಾಜ್ (22) ಶಿಕ್ಷೆಗೊಳಗಾದ ಆಟೋ ಚಾಲಕರೆಂದು ಗುರುತಿಸಲಾಗಿದೆ. 

ಈ ಪ್ರಕರಣದ ಮತ್ತೋರ್ವ ಆರೋಪಿಯಾಗಿದ್ದ ರಜಾಕ್ ಯಾನೆ ಸಾದಿಕ್ ಪಾಷಾ ಎಂಬವರು ಪ್ರಕರಣದ ವಿಚಾರಣೆ ಹಂತದಲ್ಲಿಯೇ ಅಸುನೀಗಿದ್ದರು. ನ್ಯಾಯಾಧೀಶರಾದ ಬಿ. ಜಯಂತ್‍ ಕುಮಾರ್ ರವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜೆ. ಶಾಂತರಾಜ್‍ರವರು ವಾದ ಮಂಡಿಸಿದ್ದರು. 

ಘಟನೆ ಹಿನ್ನೆಲೆ: ತೀರ್ಥಹಳ್ಳಿ ತಾಲೂಕು ಬಾಳೆಕೊಪ್ಪದ ನಿವಾಸಿಯಾದ ಸಹನಾ ಎಂಬುವರು 6-6-2018 ರಂದು ಬೆಂಗಳೂರಿಗೆ ಹೋಗಲು ಶಿವಮೊಗ್ಗಕ್ಕೆ ಆಗಮಿಸಿದ್ದರು. ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಅವರನ್ನು, ಬೆಳಿಗ್ಗೆ 10.45 ರ ಸುಮಾರಿಗೆ ಆಟೋವೊಂದರಲ್ಲಿ ಅಪಹರಿಸಲಾಗಿತ್ತು. 

ಹೊರವಲಯ ಗೋವಿಂದಾಪುರ ಗ್ರಾಮದ ದಾನಮ್ಮನ ಕೆರೆಯ ಬಳಿ ಕರೆದೊಯ್ದು, ಲಾಂಗ್‍ನಿಂದ ಹಲ್ಲೆ ನಡೆಸಲಾಗಿತ್ತು.  ನಂತರ ಸಹನಾರವರ ಬಳಿಯಿದ್ದ 3000 ರೂ. ಹಾಗೂ 14 ಸಾವಿರ ರೂ. ಮೌಲ್ಯದ ಮೊಬೈಲ್‍ನ್ನು ಕಿತ್ತುಕೊಂಡಿದ್ದರು. ತದನಂತರ ಅವರನ್ನು ಬೈಕ್‍ವೊಂದರಲ್ಲಿ ಆರೋಪಿಯು ಗೋಪಾಳಗೌಡ ಬಡಾವಣೆಯ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಕರೆತಂದಿದ್ದ. 9500 ರೂ. ಡ್ರಾ ಮಾಡಿಕೊಂಡಿದ್ದರು. ನಂತರ ಅವರಿಗೆ 200 ರೂ. ಕೊಟ್ಟು ಖಾಸಗಿ ಬಸ್ ನಿಲ್ದಾಣದ ಸಮೀಪ ಬಿಟ್ಟು ಹೋಗಿದ್ದ. ಈ ಸಂಬಂಧ ಸಹನಾರವರು ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. 

ಇವರ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ದಾಖಲಿಸಿದ್ದರು. ನ್ಯಾಯಾಲಯದ ವಿಚಾರಣೆ ವೇಳೆ ಆರೋಪಿಗಳ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ, ನ್ಯಾಯಾಧೀಶರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News