ಮುಂದಿನ ಮೂರು ವರ್ಷ ನಾನೇ ಮುಖ್ಯಮಂತ್ರಿ: ಬಿ.ಎಸ್.ಯಡಿಯೂರಪ್ಪ

Update: 2019-11-19 12:47 GMT

ಬೆಂಗಳೂರು, ನ.19: ಮುಂದಿನ ಮೂರು ವರ್ಷದವರೆಗೆ ನನ್ನನ್ನು ಸಿಎಂ ಆಗಿ ಮುಂದುವರಿಸಲು ರಾಜ್ಯದ ಜನ ತೀರ್ಮಾನಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ನಗರದ ಎಫ್‌ಕೆಸಿಸಿಐ ವತಿಯಿಂದ ಹಮ್ಮಿಕೊಂಡಿದ್ದ ‘ಮಹಿಳಾ ಉದ್ಯಮಿಗಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ರಾಜೀನಾಮೆ ನೀಡಿದ ಬಳಿಕ ನಡೆಯುತ್ತಿರುವ ಉಪ ಚುನಾವಣೆಯ ನಂತರ ಸರಕಾರ ಬೀಳಲಿದೆ ಎಂದು ವಿರೋಧ ಪಕ್ಷದ ನಾಯಕರ ಹೇಳಿಕೆಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.

ರಾಜ್ಯದ ಮತದಾರರು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದಿನ ಮೂರು ವರ್ಷಗಳ ಕಾಲವೂ ಅಧಿಕಾರ ಪೂರ್ತಿಗೊಳಿಸಬೇಕು ಎಂದು ಆಶಿಸಿದ್ದಾರೆ. ಹೀಗಾಗಿ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ವಿರೋಧ ಪಕ್ಷಗಳ ವ್ಯರ್ಥ ಪ್ರಯತ್ನ ಸಲ್ಲ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಹಗುರವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. 2018 ರಲ್ಲಿ ನಡೆದ ವಿಧಾನಸಭಾ ಹಾಗೂ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನರು ಎರಡೂ ಪಕ್ಷಗಳಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 22 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಹೇಳಿದ್ದೆ. ಆದರೆ 25 ಸ್ಥಾನಗಳಲ್ಲಿ ಪಕ್ಷ ಜಯಭೇರಿ ಬಾರಿಸಿತು. ಮಾಜಿ ಪ್ರಧಾನಿ ದೇವೇಗೌಡ ದಯನೀಯ ಸೋಲನ್ನು ಅನುಭವಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಕೇವಲ 1 ಸ್ಥಾನಗಳಲ್ಲಿ ಗೆಲುವು ಪಡೆಯಲು ಸಾಧ್ಯವಾಯಿತು. ಆದರೂ ಎರಡು ಪಕ್ಷಗಳು ಇನ್ನೂ ಬುದ್ಧಿ ಕಲಿತಿಲ್ಲ ಎಂದರು.

ರಾಜ್ಯದಲ್ಲಿ ಎರಡು ಭಾರಿ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದರು. ಅವರಿಗೆ ಸಹಾಯ ಕಲ್ಪಿಸುವ ಸಲುವಾಗಿ ಮನೆ, ಮಠ ಬಿಟ್ಟು ಉತ್ತರ ಕರ್ನಾಟಕದಲ್ಲಿಯೇ ನೆಲೆಸಿದ್ದೆ. ನೂರು ದಿನಗಳ ಆಡಳಿತಾವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.

'ಸಿದ್ದರಾಮಯ್ಯ ಉತ್ತರಿಸಲಿ'
ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿರುವ ಆ ಸಂಸ್ಥೆಯನ್ನು ಬೆಳೆಸಿದವರೇ ಸಿದ್ಧರಾಮಯ್ಯ. ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಆ ಸಂಘಟನೆಯ ಮೇಲಿದ್ದಂತಹ ಎಲ್ಲ ಪ್ರಕರಣಗಳನ್ನು ಹಿಂಪಡೆದರು. ಅದರ ಮೇಲೆ ಅಂದೇ ತನಿಖೆ ನಡೆಸಿದ್ದರೆ ಆ ಸಂಘಟನೆ ಬೆಳೆಯುತ್ತಿರಲಿಲ್ಲ. ಇದಕ್ಕೆ ಸಿದ್ದರಾಮಯ್ಯ ಉತ್ತರ ನೀಡಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸ್ವಾರ್ಥಕ್ಕಾಗಿ ಆ ಸಂಘಟನೆಯನ್ನು ಬೆಳೆಸಿದರು. ಶಿವಮೊಗ್ಗದಲ್ಲಿ ಕೊಲೆಯಾಯಿತು. ಆಗಲೂ ಆ ಸಂಘಟನೆಯನ್ನು ರಕ್ಷಣೆ ಮಾಡಿದರು. ಮೈಸೂರಿನಲ್ಲಿ ಗಲಾಟೆಯಾದಾಗ ಅಲ್ಲಿಯೂ ರಕ್ಷಣೆ ನೀಡಿದರು. ಇದನ್ನು ರಾಜ್ಯದ ಜನತೆ ಗಮನಿಸುತ್ತಿದ್ದು, ತಕ್ಕ ಉತ್ತರ ನೀಡಲಿದ್ದಾರೆ.
-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News